Home ಜಿಲ್ಲೆ ಕರ್ನಾಟಕದ ಕೈಗಾರಿಕಾ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ತಹಶೀಲ್ದಾರ ಅನೀಲ...

ಕರ್ನಾಟಕದ ಕೈಗಾರಿಕಾ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ತಹಶೀಲ್ದಾರ ಅನೀಲ ಬಡಗೇರ

ಸಂಜೆ ವಾಣಿ ವಾರ್ತೆ |
ಜಮಖಂಡಿ:ಜೂ.೪:ನಗರದ ತಾಲೂಕಾಡಳಿತ ಸೌಧದ ತಹಶೀಲ್ದಾರ ಸಭಾಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ ಅನೀಲ ಬಡಗೇರ, “ಆಧುನಿಕ ಭಾರತಕ್ಕೆ ತಕ್ಕಂತೆ ಮೈಸೂರು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ ಮಹಾನ್ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದು ಮೈಸೂರು, ಬೆಂಗಳೂರು ಹಾಗೂ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದಕ್ಕೆ ಅವರ ದೂರದೃಷ್ಟಿಯ ವಿಚಾರಧಾರೆಗಳು ಪ್ರಮುಖ ಕಾರಣವಾಗಿವೆ” ಎಂದು ಹೇಳಿದರು.
ಮೈಸೂರು ಸ್ಯಾಂಡಲ್ ಫ್ಯಾಕ್ಟರಿ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಹಾಗೂ ಕೈಗಾರಿಕಾ ಸಂಸ್ಥೆಗಳ ಸ್ಥಾಪನೆ ಮೂಲಕ ಮೈಸೂರು ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಕೈಗಾರಿಕೆಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ಹಾಕಿಕೊಟ್ಟ ಭದ್ರ ಅಡಿಪಾಯದ ಫಲವಾಗಿ ಕರ್ನಾಟಕ ಇಂದು ಕೈಗಾರಿಕೆ, ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ರಾಜ್ಯವಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ, ಸಾಧನೆ ಹಾಗೂ ದೂರದೃಷ್ಟಿಯನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿರಸ್ತೆದಾರ ಜಿ.ಎಸ್. ಹೋಸಕೇರಿ, ಆಹಾರ ಸಿರಸ್ತೆದಾರ ಬಸವರಾಜ ತಾಳಿಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮರನೂರ, ಎಂ.ವಿ. ಅಕ್ಕಲಕೋಟ, ಪ್ರವೀಣ ಕೊಣಿ, ಲಕ್ಷ್ಮೀ ಅಂಗಡಿ, ಮಹೇಶ ವಾಡಗಿ, ಪ್ರಜ್ವಲ್ ಲಿಂಗದ, ಅಬ್ಸರ್ ಕಡಿವಾಳ, ಭಗವಾನ್ ಗುಳ್ಳನ್ನವರ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.