
ತುಮಕೂರು, ಡಿ. ೨೭- ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿರುವ ನಾಗಸುಬ್ರಹ್ಮಣ್ಯ ದೇವಸ್ಥಾನದ ೧೭ನೇ ವಾರ್ಷಿಕೋತ್ಸವ ಹಾಗೂ ತುಳುಷಷ್ಠಿ ಪ್ರಯುಕ್ತ ವಾರ್ಷಿಕ ಕುಂಭಾಭಿಷೇಕ, ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದವು.
ಇದರ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನಾಗಸುಬ್ರಮಣ್ಯ ಸ್ವಾಮಿಯ ವೈಭವದ ಉತ್ಸವ ನಡೆಯಿತು. ಪೂರ್ಣಕುಂಭ, ಮಂಗಳವಾದ್ಯಗಳೊಂದಿಗೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಆಕರ್ಷಕ ಪ್ರದರ್ಶನ ನೀಡಿದವು. ಬೆಳಗ್ಗೆ ಗಂಗಾ ಪೂಜೆ, ಗುರು ಪ್ರಾರ್ಥನೆ, ವೇದಪಾರಾಯಣ, ಗಣಪತಿ ಪೂಜೆ, ಸ್ವಸ್ಥಿ ಪುಣ್ಯಾಹ:, ಮಹಾಸಂಕಲ್ಪ ಕಳಶ ಸ್ಥಾಪನೆ, ಫಲಪಂಚಾಮೃತ ಅಭಿಷೇಕ, ನಾಗಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ, ಗಣಪತಿ ನವಗ್ರಹ ಮೋಮ, ಸ್ಕಂದ ಹೋಮ, ಸರ್ಪಸೂಕ್ತ ಹೋಮ, ಸರ್ಪ ಮೂಲ ಗಣಪತಿ ನವಗ್ರಹ ಹೋಮ, ಸರ್ಪ ಮೂಲಮಂತ್ರ ಹೋಮ ಏರ್ಪಡಿಸಲಾಗಿತ್ತು.
ಮಧ್ಯಾಹ್ನ ಪೂರ್ಣಾಹುತಿ, ಕುಂಭಾಭಿಷೇಕ, ಮಹಾಮಂಗಳಾರತಿ ನೆರವೇರಿದವು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ನಿರ್ಮಾತೃ ಹಾಗೂ ಸಮಿತಿಯ ಮಹಾ ಪೋಷಕರಾದ ಬಿ.ಹನುಮಂತಪ್ಪ, ಎಸಿಎಂ ಧನಂಜಯ, ನಂದಿ ಗ್ರೂಪ್ಸ್ ಮಾಲೀಕ ನಂದಿ ಪ್ರಭಾಕರ್ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಇದರ ಅಂಗವಾಗಿ ಬೆಳಗಿನಿಂದಲೂ ನಾಗಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.




























