
ಕರಜಗಿ:ಮೇ.೨೮:ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಅವರ ಬಾಯಿಯ ಮೇಲೆ ಹಿಡಿತ ತಪ್ಪಿದೆ.ಹೀಗಾಗಿ ಅವರ ನಾಲಿಗೆಗೆ ಒಳ್ಳೆಯ ಸಾಬೂನಿನಿಂದ ತೊಳೆಯಬೇಕು ಅಂದಾಗ ಮಾತ್ರ ಸುಧಾರಣೆ ಹೊಂದಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಅಫ್ತಾಬ್ (ಪಪ್ಪು)ಪಟೇಲ್ ಕಿಡಿಕಾರಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಇತ್ತೀಚೆಗೆ ಬಿಜೆಪಿ ಪಕ್ಷದಿಂದ ಕಲಬುರಗಿ ಚಲೋ ಕಾರ್ಯಕ್ರಮದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್,ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನೀವು ಪಾಕಿಸ್ತಾನದಿಂದ ಬಂದಿದ್ದೀರಾ ಎಂದು ಕೇಳಿರುವುದು ಖಂಡನೀಯ.ಇದು ಕೇವಲ ಜಿಲ್ಲಾಧಿಕಾರಿಗಳಿಗೆ ಮಾಡಿದ ಅಪಮಾನ ಅಲ್ಲ ಇಡೀ ಭಾರತೀಯರಿಗೆ ಮಾಡಿದ ಅಪಮಾನವಾಗಿದೆ.ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಚುನಾವಣೆ ವೇಳೆ ಉತ್ತಮ ಅಡಳಿತ ವ್ಯವಸ್ಥೆ ನಿರ್ವಹಣೆಗಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಜಿಲ್ಲೆಯ ನೆಚ್ಚಿನ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.ಆದರೆ ಇದನ್ನು ಸಹಿಸಿಕೊಳ್ಳದ ಎನ್.ರವಿಕುಮಾರ್ ರಂತಹ ಬಿಜೆಪಿ ಮತಿವಾದಿ ನಾಯಕರು ಹತಾಶರಾಗಿ ಮಹಿಳಾ ಅಧಿಕಾರಿಯನ್ನು ಅಪಮಾನ ಮಾಡುತ್ತಿದ್ದಾರೆ.ಅದೇ ರೀತಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸಚಿವ ಆಪರೇಷನ್ ಸಿಂಧೂರನಲ್ಲಿ ಮುಖ್ಯ ಪಾತ್ರವಹಿಸಿದ ಭಾರತ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರಿಗೆ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾನೆ.ಇದು ಬಿಜೆಪಿ ಅವರ ಸಂಸ್ಕೃತಿ ತೋರಿಸಿಕೊಡುತ್ತದೆ.ಈ ರೀತಿಯಾಗಿ ಹೇಳಿಕೆ ಕೊಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಬಿಜೆಪಿ ಅವರಿಗೆ ಪಾಕಿಸ್ತಾನದೊಂದಿಗೆ ಇಷ್ಟೊಂದು ಪ್ರೀತಿ ಇರುವುದರಿಂದ ಪ್ರತಿಯೊಂದು ಭಾಷಣದಲ್ಲಿ ಆ ರಾಷ್ಟ್ರದ ಹೆಸರು ಬಳಸುತ್ತಾರೆ.ನಾವು ಭಾರತದ ನಿವಾಸಿಗಳು ಬದುಕುವುದು ಮತ್ತು ಸಾಯುವುದು ಇಲ್ಲೇ. ಪದೇ ಪದೇ ಆ ರಾಷ್ಟ್ರದ ಹೆಸರು ಬಾಯಿಯಲ್ಲಿ ಬರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಎನ್.ರವಿಕುಮಾರ ಈ ರೀತಿ ಹೇಳಿಕೆ ನೀಡುವುದು ಇದೇನು ಹೊಸದಲ್ಲ,ಪ್ರತಿ ಬಾರಿಯೂ ಜಾತಿ, ಧರ್ಮದ ವಿಷ ಬೀಜ ಬಿತ್ತುವ ಇಂತಹ ಅವಿವೇಕಿ ಮುಖಂಡ ಕೂಡಲೇ ಬೇಷರತ್ತಾಗಿ ಬಹಿರಂಗ ಕ್ಷಮೆ ಕೇಳಬೇಕು,ಇಲ್ಲದಿದ್ದರೆ ಇತನ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.