Home ಜಿಲ್ಲೆ ಕಲಬುರಗಿ ಮಠಗಳು ಭಕ್ತರ ಜೀವನಕ್ಕೆ ದಾರಿದೀಪ: ಡಾ. ಅಭಿನವ ಚನ್ನಬಸವ ಶಿವಾಚಾರ್ಯರು

ಮಠಗಳು ಭಕ್ತರ ಜೀವನಕ್ಕೆ ದಾರಿದೀಪ: ಡಾ. ಅಭಿನವ ಚನ್ನಬಸವ ಶಿವಾಚಾರ್ಯರು

ಆಳಂದ:ಫೆ.25: ಆಳಂದದ ಐತಿಹಾಸಿಕ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಪ್ರವಚನ ಮತ್ತು ಮಹಾಮಂಗಲ ಧಾರ್ಮಿಕ ಸಮಾರಂಭ ಭಕ್ತರ ಸಮ್ಮೇಳನದಲ್ಲಿ ಜರುಗಿತು.
ಸಮಾರಂಭದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಆಳಂದ ನಂದವಾಡಗಿ ಹಾಗೂ ಜಾಲವಾದಿ ಹಿರೇಮಠದ ಪೀಠಾಧಿಪತಿ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು, “ಮಠಗಳು ಕೇವಲ ಭಕ್ತರ ಪರಂಪರೆಯಲ್ಲ, ಧಾರ್ಮಿಕ ಬೋಧನೆ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಮನುಷ್ಯನ ಜೀವನವನ್ನು ಸುಸಂಸ್ಕøತ, ಸಾರ್ಥಕ ಮತ್ತು ಸನ್ಮಾರ್ಗದತ್ತ ಕೊಂಡೊಯ್ಯುವ ದಾರಿದೀಪವಾಗಿವೆ” ಎಂದು ಹೇಳಿದರು.
“ಮಾನವ ಬದುಕು ಕೇವಲ ಭೌತಿಕ ಸಾಧನೆಗಳಿಗೆ ಸೀಮಿತವಾಗದೆ ಆತ್ಮೀಯ ಶುದ್ಧತೆ, ನೈತಿಕ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳಿಂದ ಸಮೃದ್ಧವಾಗಬೇಕಾದರೆ ಧರ್ಮ ಮತ್ತು ಪರಂಪರೆಯ ಮಾರ್ಗದರ್ಶನ ಅನಿವಾರ್ಯ” ಎಂದು ಒತ್ತಿ ಹೇಳಿದ ಅವರು, ಶರಣರು, ಸಂತರು ಮತ್ತು ಮಹಾಂತರ ವಚನ ಸಾಹಿತ್ಯ ಹಾಗೂ ಬೋಧನೆಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ಶಕ್ತಿ ಎಂದರು. ಇಂದಿನ ಯುವ ಪೀಳಿಗೆ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸಂತೆಕೆಲ್ಲೂರ ಫಿರೋಜಾಬಾದ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಆಧ್ಯಾತ್ಮಿಕ ಮಾರ್ಗವು ಮನುಷ್ಯನ ಜೀವನಕ್ಕೆ ಶಾಂತಿ ಮತ್ತು ಸ್ಥೈರ್ಯ ನೀಡುತ್ತದೆ. ಮಠಗಳ ಪೀಠಾಧಿಪತಿಗಳು ಭಕ್ತರ ಬಾಳಿಗೆ ಬೆಳಕಾಗಿ ಸನ್ಮಾರ್ಗ ತೋರಿಸುತ್ತಿದ್ದಾರೆ. ಅವರ ಶಾಖಾ ಮಠಗಳ ಮೂಲಕ ನಡೆಯುತ್ತಿರುವ ಧಾರ್ಮಿಕ ಹಾಗೂ ಪರೋಪಕಾರ ಕಾರ್ಯಗಳು ಅತ್ಯಂತ ಶ್ಲಾಘನೀಯ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, “ಧಾರ್ಮಿಕ ಪರಂಪರೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಆಳಂದ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, “ಪಟ್ಟಣದ ಮಹಾಂತೇಶ್ವರ ಮಠ ಮತ್ತು ಸಿದ್ಧಲಿಂಗ ಶಿವಾಚಾರ್ಯರ ಶ್ರೀಮಠಗಳು ಏಕತೆಯಿಂದ ಭಕ್ತಿಯ ಸಾಮರಸ್ಯ ಮೂಡಿಸುತ್ತಿವೆ” ಎಂದರು. ಹರಸೂರ ಕರಸಿದ್ಧೇಶ್ವರ ಕಲ್ಮಠದ ಕರಸಿದ್ಧೇಶ್ವರ ಶಿವಾಚಾರ್ಯರು ಹಾಗೂ ಆಳಂದ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಉಪಸ್ಥಿತರಿದ್ದರು.
ಬೆಳಗಿನ ಜಾವ ಕರ್ತೃಗದ್ದುಗೆಯಲ್ಲಿ ರುದ್ರಾಭಿμÉೀಕ, ಸಹಸ್ರ ಬಿಲ್ವಾರ್ಚನೆ, ವಟುಗಳಿಗೆ ಆಯಾಚಾರ ಹಾಗೂ ನವಗ್ರಹ ಪೂಜೆಯನ್ನು ಬೆಳಗಾವಿಯ ಚಂದ್ರಶೇಖರ ಶಾಸ್ತ್ರಿ, ನಾಗಭೂಷಣ ಶಾಸ್ತ್ರಿ ಮತ್ತು ಬಸಯ್ಯಾ ಶಾಸ್ತ್ರಿ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.
ತೋಳನೂರಿನ ಸಿದ್ಧಯ್ಯಾ ಶಾಸ್ತ್ರಿಯವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಿತು. ಕಲಾವಿದ ಶಿವಶರಣಪ್ಪ ಪೂಜಾರಿ ಸಂಗೀತಕ್ಕೆ, ಅಶೋಕ ಆಳಂದ ಸಾಥ್ ನೀಡಿದರು. ಮಹಾಮಂಗಲ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಸಮಾರಂಭದಲ್ಲಿ ಡಾ. ಅಪ್ಪಾರಾವ್ ದೇಶಮುಖ್, ಧನೇಶ ದೇಶಮುಖ್ ಹಿರೋಳಿ, ಬೆಂಗಳೂರಿನ ಚಂದಾರಾವ್ ದೇಶಮುಖ್, ಕಲಬುರಗಿ ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಸಂಜಯ ಎಸ್. ರೆಡ್ಡಿ, ಎಚ್‍ಕೆಇ ಪ್ರಾಚಾರ್ಯ ಎ.ಬಿ.ಹೊಸಮನಿ, ನಿಜಲಿಂಗಪ್ಪ ಕೊರಳ್ಳಿ ಸೇರಿದಂತೆ ಜಾಲವಾದಿ, ನಂದವಾಡಗಿ, ಹತ್ತರಗಾ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.