ಸಂಗೀತದಿಂದ ಮಾನಸಿಕ ನೆಮ್ಮದಿ: ಡಾ. ಶಿವಶರಣಪ್ಪ

ಕಲಬುರಗಿ :ಜ.5: ಕಲೆ, ಸಾಹಿತ್ಯ, ಸಂಗೀತ ಇರುವ ಕಡೆ ಭಗವಂತ ನೆಲೆಸಿರುತ್ತಾನೆ ಎಂಬ ಪ್ರತೀತಿಯಿದೆ. ಸಂಗೀತ ಮಾನಸಿಕ ನೆಮ್ಮದಿ ಕೊಟ್ಟು, ಒತ್ತಡ ದೂರ ಮಾಡುವ ಸಂಜೀವಿನಿ ಇದ್ದಂತೆ ಎಂದು ಇತಿಹಾಸ ಉಪನ್ಯಾಸಕರಾದ
ಡಾ. ಶಿವಶರಣಪ್ಪ ಎಮ್ ಚೆನ್ನೂರ ಹೇಳಿದರು. ಅವರು ಕಲಬುರ್ಗಿ ನಗರದ ಜೇವರ್ಗಿ ಕ್ರಾಸ್ ಹತ್ತಿರ ಇರುವ ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ
ಶ್ವೇತಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ
ಜಾನಪದ ಜಾತ್ರೆ ವಿಶೇಷ ಸಾಂಸ್ಕøತಿಕ ಸಂಗೀತ ಸೌರಭ ಕಾರ್ಯಕ್ರಮ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು
ಸಂಗೀತದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ಪ್ರಯೋಜನಗಳಿವೆ ಇದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ, ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ ಮತ್ತು ಸಂಗೀತ ಕಲಿಯುವುದರಿಂದ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಜೀವನ ಕೌಶಲ್ಯಗಳು ಹೆಚ್ಚಾಗುತ್ತವೆ, ಇದು ಒಟ್ಟಾರೆ ಯೋಗಕ್ಷೇಮಕ್ಕೆ ಸಹಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ್ ಚಂದ್ರ ಪೂಜಾರಿ ಅಲಂಕರಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಂಡುರಂಗ ಕುಲಕರ್ಣಿ, ಶ್ರೀಮತಿ ಸವಿತಾ ಪಾಟೀಲ್, ಶ್ರೀ ಪ್ರೇಮ್ ಕುಮಾರ್, ವಿದ್ಯಾಧರ ಪಾಟೀಲ್, ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಈರಣ್ಣ ಸಲಗರ ಜಾನಪದ ಗೀತೆ ಹಾಡಿದರು. ಶ್ರೀ ಉದಯಕುಮಾರ್ ಸಾಗರ್ ಸುಗ್ಗಿ ಗೀತೆ ಹಾಡಿದರು. ಶ್ರೀ ಉಮೇಶ್ ಉಡಚಣ ಸಾಂಪ್ರದಾಯಿಕ ಹಾಡುಗಳನ್ನು ಹಾಡಿದರು. ಶ್ರೀಮತಿ ಶಿವಲೀಲಾ ತಳವಾರ್ ಮೊಹರಂ ಪದಗಳನ್ನು ಹಾಡಿದರು. ಶ್ರೀ ಶಾಂತಯ್ಯ ವಚನ ಗಾಯನ ನಡೆಸಿದರು. ಶಾಂತವೀರ್ ಪಾಟೀಲ್ ಭಕ್ತಿಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಇನ್ನು ಅನೇಕ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.