ಯುವಕನ ಕೊಲೆ: 24 ಗಂಟೆಯೊಳಗಡೆ ಆರೋಪಿಗಳ ಸೆರೆ

ಕಲಬುರಗಿ,ನ.4-ಇದೇ ತಿಂಗಳು 2 ರಂದು ನಗರದ ವಿಜಯ ನಗರದಲ್ಲಿ ನಡೆದ ರಿತೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ.ನಗರ ಪೊಲೀಸರು 24 ಗಂಟೆಯೊಳಗಡೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಜಯ ನಗರದ ಸಚಿನ್ ತಂದೆ ಜಗನ್ನಾಥ ಡೊಂಗರಗಾಂವ (35) ಮತ್ತು ಶ್ರೀಕಾಂತ ತಂದೆ ಲಕ್ಷ್ಮಣ ಬಾವಿಕಟ್ಟಿ (29) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಬಂಡೆ ಬೊಮ್ಮಸಂದ್ರದಲ್ಲಿ ಬಾಡಿಗೆ ಮನೆಯಲ್ಲಿದ್ದು, ಉಪ ಜೀವನ ನಡೆಸುತ್ತಿದ್ದ ರಿತೇಶ್ ಇತ್ತೀಚೆಗಷ್ಟೇ ಕಲಬುರಗಿಗೆ ಆಗಮಿಸಿದ್ದ. ವಿಜಯ ನಗರದಲ್ಲಿರುವ ಮನೆಯ ಹತ್ತಿರ ರಿತೇಶ್ ತಲೆ ಮೇಲೆ ರೇಜಿಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ರಿತೇಶ್ ಸಹೋದರಿ ರೋಶನಿ ಜಗನ್ನಾಥ ರಾಂಪೂರೆ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಆರ್.ಜಿ.ನಗರ ಪೊಲೀಸ್ ಠಾಣೆ ಪಿಐ ಕುಬೇರ್ ಎಸ್.ರಾಯಮಾನೆ, ಪಿಎಸ್‍ಐ ಯಶೋಧಾ ಕಟಕೆ, ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಮಲ್ಲನಗೌಡ, ತಾರಾಸಿಂಗ್ ರಾಠೋಡ್, ಬಸವರಾಜ, ಅರೇಶ, ಆತ್ಮಕುಮಾರ, ಉಮೇಶ್, ಶರಣಬಸವ, ರಾಜಕುಮಾರ ಮತ್ತು ತುಕಾರಾಮ ಅವರು ತನಿಖೆ ನಡೆಸಿ 24 ಗಂಟೆಯೊಳಗಡೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
24 ಗಂಟೆಯೊಳಗಡೆ ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.