ಕೊಲೆ: 24 ಗಂಟೆಯೊಳಗೆ ಆರೋಪಿಗಳ ಸೆರೆ

ಕಲಬುರಗಿ,ಜೂ.8-ಇಲ್ಲಿಗೆ ಸಮೀಪದ ಫಿರೋಜಾಬಾದ ದರ್ಗಾ ಹತ್ತಿರ ಮೇ.5 ರಂದು ನಡೆದ ಕಲಬುರಗಿ ನಗರದ ನಜಮೋದ್ದಿನ್ ತಂದೆ ಅಬ್ದುಲ್ ಸತ್ತಾರ ಸೊಲಾಪೂರಿ (45) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತಾಬಾದ ಠಾಣೆ ಪೊಲೀಸರು 24 ಗಂಟೆಯೊಳಗೆ 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಜಮೋದ್ದಿನ್ ಮತ್ತು ಇತರರು ಕಾರಿನಲ್ಲಿ ಬಿ.ಗುಡಿ ಹತ್ತಿರವಿರುವ ಸಗರ ಶರೀಫ್ ದರ್ಗಾಕ್ಕೆ ಹೋಗುತ್ತಿದ್ದಾಗ ಫಿರೋಜಾಬಾದ ದರ್ಗಾ ಹತ್ತಿರ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ನಜಮೋದ್ದಿನ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು.
ಈ ಹಿಂದೆ ಕೊಲೆಯಾದ ರೌಡಿಶೀಟರ್ ಖಲೀಲ್ ಸಹಚರರಾದ ಗಜಾನನ ಮತ್ತು ಇತರರು ಸೇರಿ ಈ ಕೊಲೆ ಮಾಡಿದ್ದಾರೆ ಎಂದು ನಜಮೋದ್ದಿನ್ ಸಹೋದರ ನಿಜಾಮುದ್ದೀನ್ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದ ಮೇರೆಗೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ನೇತೃತ್ವದಲ್ಲಿ ಫರಹತಾಬಾದ ಪೊಲೀಸ್ ಠಾಣೆ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಪಿಎಸ್‍ಐ ಸುರೇಶ ಮಲಘಾಣ, ಎಎಸ್‍ಐ ಅಶೋಕ, ಸಿಬ್ಬಂದಿಗಳಾದ ಗಡ್ಡೆಪ್ಪ ಕೋರೆ, ಸಾಜೀದ್, ಲಕ್ಷ್ಮೀಕಾಂತ, ಆನಂದ, ಮೆಹಬೂಬ್, ಲಿಂಗರಾಜ, ಶಾಂತಮ್ಮ, ಮಂಜುನಾಥ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
24 ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.