
ಔರಾದ್ :ಮಾ.9: ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಹಾಲಹಳ್ಳಿ ಸಮೀಪದ ನೀರು ಶುದ್ಧೀಕರಣ ಘಟಕದಲ್ಲಿ ಸರಿಯಾಗಿ ನೀರು ಶುದ್ಧೀಕರಣವಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಔರಾದ್ ಸಿವಿಲ್ ಕೋರ್ಟ್‍ನ ಹಿರಿಯ ನ್ಯಾಯಾಧೀಶರಾದ ಹಾಜಿ ಹುಸೇನಸಾಬ್ ಯಾದವಾಡ ಅವರು ಶುಕ್ರವಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಘಟಕದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ನೀರು ಶುದ್ಧೀಕರಣ ಘಟಕದಲ್ಲಿ ನಡೆದಿರುವ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ ಪ್ರಭಾರಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಹಸೀಲ್ದಾರ ಮಹೇಶ ಪಾಟೀಲ ಅವರು ಪುರಸಭೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು.
ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ ಮಹೇಶ ಪಾಟೀಲ ಅವರು, ನಾನು ಕಚೇರಿಯ ಪ್ರಭಾರ ವಹಿಸಿಕೊಂಡು ಎರಡು ದಿನಗಳಷ್ಟೇ ಆಗಿದೆ. ಈ ವೇಳೆ ಘಟಕದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದಾಗ ಕಳೆದ ಎರಡು ತಿಂಗಳಿಂದ ಬ್ಲೀಚಿಂಗ್ ಪೌಡರ ಹಾಗೂ ಆಲಮ ವಿತರಕರಿಗೆ ಹಣ ಪಾವತಿಸದಿರುವುದರಿಂದ ಅಗತ್ಯವಾದ ರಾಸಾಯನಿಕಗಳನ್ನು ಪೂರೈಕೆ ಮಾಡಲಾಗದೆ ನೀರು ಸರಿಯಾಗಿ ಶುದ್ಧೀಕರಣವಾಗುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ವಿತರಕರಿಗೆ ಮನವರಿಕೆ ಮಾಡಲಾಗಿದ್ದು, ಸ್ವಲ್ಪ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈಗ ಬ್ಲೀಚಿಂಗ ಪೌಡರ್ ಹಾಗೂ ಆಲಮ್ ವಿತರಣೆ ಪ್ರಾರಂಭವಾಗಿದ್ದು, ನೀರು ಶುದ್ಧೀಕರಣ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಘಟಕದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಸುಮಾರು ಶೇ.60ರಷ್ಟು ಶುದ್ಧ ನೀರು ಪಟ್ಟಣಕ್ಕೆ ಪೂರೈಕೆಯಾಗುತ್ತಿದೆ. ಮುಂದೆ ಸಂಪೂರ್ಣವಾಗಿ ಶುದ್ಧ ನೀರು ಪೂರೈಕೆಯಾಗಲಿದೆ ಎಂದು ತಹಸೀಲ್ದಾರ ಮಹೇಶ ಪಾಟೀಲ ತಿಳಿಸಿದ್ದಾರೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಪುರಸಭೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಯಾವುದೇ ರೀತಿಯ ಸಮಸ್ಯೆ ಎದುರಾದರೆ ತಕ್ಷಣವೇ ನೇರವಾಗಿ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ ಪಟ್ಟಣದ ಕೆಲ ಭಾಗಗಳಲ್ಲಿ ಅಸ್ವಚ್ಛತೆ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬರದಂತೆ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ತಹಸೀಲ್ದಾರ್ ಸ್ಪಂದನೆಗೆ ಸಾರ್ವಜನಿಕರಿಂದ ಮೆಚ್ಚುಗೆ
ಹಾಲಹಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ಹಿರಿಯ ನ್ಯಾಯಾಧೀಶರಾದ ಹಾಜಿ ಹುಸೇನಸಾಬ್ ಯಾದವಾಡ ಅವರು ಭೇಟಿ ನೀಡಿದ ಬಳಿಕ ತಕ್ಷಣ ಸ್ಪಂದಿಸಿ ಘಟಕವನ್ನು ಸ್ವಚ್ಛಗೊಳಿಸಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಂಡ ತಹಸೀಲ್ದಾರ ಮಹೇಶ ಪಾಟೀಲ ಅವರ ಕಾರ್ಯಕ್ಕೆ ಪಟ್ಟಣದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಪಟ್ಟಣಕ್ಕೆ ಶುದ್ಧ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಔರಾದ್ ಪಟ್ಟಣಕ್ಕೆ ಇನ್ಮುಂದು ಕಲುಷಿತ ನೀರು ಪೂರೈಕೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಈ ಸಂಬಂಧ ಪುರಸಭೆಯ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಅಲ್ಲದೇ ಸಾರ್ವಜನಿಕರ ಕೆಲಸಗಳು ತ್ವರಿತ ಮಾಡಿಕೊಡಬೇಕು ಎಂದು ಕಚೇರಿಯ ಸಿಬ್ಬಂದಿಗಳಿಗೆ ತಿಳಿಸಿದ್ದು, ಪಟ್ಟಣ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡುವಂತೆಯೂ ಕಾರ್ಮಿಕರಿಗೆ ತಿಳಿಸಲಾಗಿದೆ.
ಮಹೇಶ ಪಾಟೀಲ
ತಹಸೀಲ್ದಾರ್ ಔರಾದ್


















