Home ಜಿಲ್ಲೆ ಬೆಂಗಳೂರು ಕಟ್ಟೆ ಕೆಳಗಿನ ಮುನೇಶ್ವರ ಜಾತ್ರೆ – ಕರಗೋತ್ಸವ

ಕಟ್ಟೆ ಕೆಳಗಿನ ಮುನೇಶ್ವರ ಜಾತ್ರೆ – ಕರಗೋತ್ಸವ

ಕೋಲಾರ.ಮಾ,೨೧- ನಗರದ ಕಟ್ಟೆ ಕೆಳಗಿನ ಗಾಂಧಿನಗರ ಸಮೀಪದಲ್ಲಿ ಯುಗಾದಿ ಹಬ್ಬದ ಮಾರನೇ ದಿನ ನಡೆಯಲಿರುವ ಮುನೇಶ್ವರ ಜಾತ್ರೆ (ಉಟ್ಲು ಪರಿಷೆ) ಹಿಂದಿನಿಂದಲೂ ಆಚರಿಸಿ ಕೊಂಡ ಬರಲಾಗುತ್ತಿದ್ದು ಈ ವರ್ಷವು ಅದ್ಧೂರಿಯಾಗಿ ನಡೆಯಿತು.


ಗಾಂಧಿನಗರದಿಂದ ಗದ್ದೆಕಣ್ಣೂರಿಗೆ ಹೋಗುವ ಮಾರ್ಗದ ಹೊಲಗಳ ಮಧ್ಯೆ ಇರುವ ಮುನೇಶ್ವರ ಗುಡಿಯಲ್ಲಿ ಸಾಮಾನ್ಯವಾಗಿ ಹಿಂದುಗಳು ಭಕ್ತಿ ಭಾವದಿಂದ ಆಚರಿಸುತ್ತಾ ಬರುತ್ತಿದ್ದಾರೆ.


ವಿಶೇಷವೆಂದರೆ ದಲಿತ ವರ್ಗದವರು ಬೆಳಗ್ಗೆ ಮುನೇಶ್ವರನಿಗೆ ಕೋಳಿ,ಕುರಿ, ಮೇಕೆ ಇತ್ಯಾದಿಗಳನ್ನು ಬಲಿ ನೀಡಿ ಪೊಜೆ ಸಲ್ಲಿಸಿದರೆ ಮೇಲ್ವರ್ಗದವರು ಮುನೇಶ್ವರನಿಗೆ ಪಚ್ಚೆ, ಕಡಲೆ ಪುರಿ, ತೆಂಗಿನಕಾಯಿ ಹೂವುಗಳನ್ನು ಅರ್ಪಿಸಿ ಭಕ್ತ ಭಾವದಲ್ಲಿ ಪೂಜೆ ಸಲ್ಲಿಸಿ ಯಾವೂದೇ ಗಂಡಾಂತರಗಳು ಬಾರದಂತೆ ರಕ್ಷಿಸಲು ಪ್ರಾರ್ಥಿಸುತ್ತಾರೆ.


ಮಣ್ಣಿನಿಂದ ರಚಿಸಿರುವ ಮುನೇಶ್ವರ ಮೂರ್ತಿಯ ಗುಡಿಯ ಹಿಂಭಾಗದಲ್ಲಿ ಮಾರಮ್ಮ ದೇವಿಯ ಸಣ್ಣ ಗುಡಿಯೊಂದು ಇದ್ದು ಮುನೇಶ್ವರನ ಪೂಜೆಯ ನಂತರ ಮಾರಮ್ಮ ದೇವಿಗೆ ಪೂಜೆ ಸಲ್ಲಿಸುವುದು, ದೀಪಾರಾಧನೆ, ಕಂಕಣ ಕಟ್ಟುವುದು ಇಲ್ಲಿನ ಪದ್ದತಿಯಾಗಿದೆ. ಕೆಲವು ಭಕ್ತಾಧಿಗಳು ಪ್ರಸಾದ ದಾಸೋಹವನ್ನು ನಡೆಸುತ್ತಾರೆ.


ಇದೇ ಸಂದರ್ಭದಲ್ಲಿ ಗಾಂಧಿ ನಗರದ ಯುವಕ ಸಂಘಟನೆಗಳು ಕರಗದ ಉತ್ಸವ, ಸಂಗೀತ ರಸ ಸಂಜೆಗಳನ್ನು ಆಯೋಜಿಸುತ್ತಾರೆ. ಗಾಂಧಿ ನಗರದ ರಸ್ತೆ ಬದಿಗಳಲ್ಲಿ ಪೂಜೆ ಸಾಮಾನುಗಳು, ತಿಂಡಿ ತಿನಿಸು, ಮಕ್ಕಳ ಅಟಿಕೆಗಳು ಸೇರಿದಂತೆ ವಿವಿಧ ಅಂಗಡಿಗಳು ಬಿಡಾರ ಹಾಕುವುದು ಪ್ರತಿ ವರ್ಷದಂತೆ ಈ ವರ್ಷವು ವ್ಯಾಪಾರ ವಹಿವಾಟುಗಳು ಜೋರಿನಿಂದ ನಡೆಯಿತು. ಗಾಂಧಿ ನಗರದ ಮುಖ್ಯ ರಸ್ತೆಯಿಂದ ಮುನೇಶ್ವರ ಗುಡಿಯವರೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.


ನಗರದ ಸುತ್ತಮುತ್ತಲಿನ ಗ್ರಾಮಾಸ್ಥರು ಸಹ ಈ ಜಾತ್ರೆಯಲ್ಲಿ ಭಾಗವಹಿಸಿ ಆರೋಗ್ಯ, ಕುಟುಂಬ ಶಾಂತಿ, ನೆಮ್ಮದಿ, , ಯಾವೂದೇ ಗಂಡಾಂತರಗಳು ಎದುರಾಗದಂತೆ ರಕ್ಷಿಸಲು ಮುನೇಶ್ವರ ಹಾಗೂ ಮಾರಮ್ಮನ ಮೊರೆ ಹೋಗುತ್ತಾರೆ.


ಜಾತ್ರೆಯಲ್ಲಿ ದೀಪಗಳ ಮೆರವಣಿಗೆ, ಡೊಳ್ಳು ಕುಣಿತ ಕಲಾ ಪ್ರಕಾರಗಳು ಮನ ರಂಜಿಸಲಿದೆ. ಸಾವಿರಾರು ಭಕ್ತಾಧಿಗಳು ಈ ಜಾತ್ರೆಯಲ್ಲಿ ಭಾಗವಹಿಸುವರು. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ.