Home ಮುಖಪುಟ ಸುದ್ದಿ ಮ್ಯೂಲ್ ಅಕೌಂಟ್‌ನಲ್ಲಿ ವಂಚನೆ: ೧೩ ಮಂದಿ ಸೆರೆ

ಮ್ಯೂಲ್ ಅಕೌಂಟ್‌ನಲ್ಲಿ ವಂಚನೆ: ೧೩ ಮಂದಿ ಸೆರೆ

ಸಿಐಡಿ ಹಠಾತ್ ದಾಳಿ

ಬೆಂಗಳೂರು,ಫೆ.೬ ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿಯ ಅಧಿಕಾರಿಗಳು ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಪ್ರಮಾಣದ ಸೈಬರ್ ವಂಚನಾ ದಂಧೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಏಕಕಾಲಕ್ಕೆ ನೂರಾರು ಕಡೆ ದಾಳಿ ನಡೆಸಿದ್ದ ಸಿಐಡಿ ಅಧಿಕಾರಿಗಳ ತಂಡಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ ೪೦ ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನ ಪತ್ತೆ ಹಚ್ಚಿದ್ದಾರೆ. ರಾಜ್ಯಾದ್ಯಂತ ೧೦೦ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡವು ದಂಧೆಯಲ್ಲಿ ತೊಡಗಿದ್ದ ೧೩ ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.


ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ.


ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಸುಮಾರು ೪೦ ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ.


ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.


ಏನಿದು ಮ್ಯೂಲ್ ಅಕೌಂಟ್ ?


ವಂಚನೆ ಮತ್ತು ಇತರ ಸೈಬರ್ ಅಪರಾಧಗಳಂತಹ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಪಡೆದ ಹಣವನ್ನ ಸಂಗ್ರಹಿಸಲು ಅಥವಾ ಲಾಂಡರ್ ಮಾಡಲು ಅಪರಾಧಿಗಳು ಬಳಸುವ ಬ್ಯಾಂಕ್ ಖಾತೆಗಳಾಗಿವೆ.