Home ಜಿಲ್ಲೆ ಕಲಬುರಗಿ ಮುಖ್ಯ ರಸ್ತೆಯಿಂದ ಶಾಲೆ ಸಂಪರ್ಕಕ್ಕೆ ಕೆಸರೇ ಅಡ್ಡಿ

ಮುಖ್ಯ ರಸ್ತೆಯಿಂದ ಶಾಲೆ ಸಂಪರ್ಕಕ್ಕೆ ಕೆಸರೇ ಅಡ್ಡಿ

ಕರಜಗಿ: ಜು.24:ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳುವ ಮುಖ್ಯ ಸಂಪರ್ಕ ರಸ್ತೆಯ ಆರಂಭದ ಸುಮಾರು 200ರಿಂದ300 ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ರೈತರು ಹಾಗೂ ಗ್ರಾಮಸ್ಥರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮುಖ್ಯ ರಸ್ತೆಯಿಂದ ಸರಿ ಸುಮಾರು 200ರಿಂದ 300ಮೀಟರ್ ವರೆಗೆ ರಸ್ತೆ ಅಭಿವೃದ್ಧಿಯಾಗದೆ ಉಳಿದಿದ್ದು, ಅದರ ನಂತರದಿಂದ ಶಾಲೆಯವರೆಗೆ ಸಿಸಿ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ಆದರೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಆರಂಭದ ರಸ್ತೆ ಅಭಿವೃದ್ಧಿಯಾಗದ ಕಾರಣ, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.

ಮಳೆ ಬಂದಾಗ ಈ ಭಾಗದಲ್ಲಿ ನೀರು ನಿಲ್ಲುವುದರ ಜೊತೆಗೆ ಗ್ರಾಮದ ಚರಂಡಿ ನೀರು ಕೂಡ ರಸ್ತೆಯಲ್ಲೇ ಹರಿದು ಬರುತ್ತಿದ್ದು, ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದೆ. ಇದರಿಂದ ಪ್ರತಿನಿತ್ಯ ಇದೇ ಮಾರ್ಗದಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಷ್ಟಪಟ್ಟು ಸಂಚರಿಸುವಂತಾಗಿದೆ. ಇದೇ ರಸ್ತೆ ಮೂಲಕ ರೈತರು ತಮ್ಮ ಹೊಲ-ಗದ್ದೆಗಳಿಗೆ ತೆರಳುವುದರಿಂದ ಅವರಿಗೂ ತೀವ್ರ ತೊಂದರೆಯಾಗುತ್ತಿದೆ.

ಮುಂದಿನ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದ್ದರೂ, ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಕೇವಲ ಸುಮಾರು 200-300ಮೀಟರ್ ರಸ್ತೆ ಬಾಕಿ ಉಳಿದಿರುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಜಾರಿ ಬೀಳುವ ಆತಂಕವೂ ಎದುರಾಗಿದೆ.

ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಅರಿತು, ಬಾಕಿ ಉಳಿದಿರುವ ರಸ್ತೆಗೆ ತಾತ್ಕಾಲಿಕವಾಗಿ ಮುರುಮ್ ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಅಥವಾ ಶಾಶ್ವತ ಪರಿಹಾರವಾಗಿ ಸಿಸಿ ರಸ್ತೆ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಸ್ತೆ ಅಭಿವೃದ್ಧಿಯಾದರೆ ವಿದ್ಯಾರ್ಥಿಗಳು, ಶಿಕ್ಷಕರು, ರೈತರು ಹಾಗೂ ಗ್ರಾಮಸ್ಥರಿಗೆ ಬಹುದೊಡ್ಡ ಅನುಕೂಲವಾಗಲಿದೆ. ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣ ಪರಿಶೀಲಿಸಿ ರಸ್ತೆ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕಳಕಳಿಯಿಂದ ಆಗ್ರಹಿಸಿದ್ದಾರೆ.