ಸಂಸದ ತುಕಾರಾಂ ಇಡಿ ವಶಕ್ಕೆ

ವಾಲ್ಮೀಕಿ ನಿಗಮ ಹಗರಣ

ಬೆಂಗಳೂರು,ಜೂ.೧೧- ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ ಆರೋಪದಲ್ಲಿ ಸಂಸದ ತುಕಾರಾಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಸುಮಾರು ೨೧ ಕೋಟಿ ಹಣವನ್ನು ಚುನಾವಣೆಗೆ ಬಳಸಿದ ಆರೋಪದಲ್ಲಿ ಸಂಸದ ತುಕಾರಾಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಇದರ ಜೊತೆಗೆ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಂಸದರು ಕೆಲ ಶಾಸಕರ ಮನೆಗಳ ಮೇಲೆ ಇಂದು ಮುಂಜಾನೆಯಿಂದ ದಾಳಿ ನಡೆಸಿದ್ದಾರೆ.


ಲೋಕಸಭಾ ಚುನಾವಣೆಯಲ್ಲಿ ನಿಗಮದ ಸುಮಾರು ೨೧ ಕೋಟಿ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಿರುವ ಆರೋಪದ ಮೇಲೆ ಏಕಕಾಲದ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.


ಬೆಳಗಿನ ಜಾವ ೪ರಿಂದ ೫ ಗಂಟೆಯ ಸುಮಾರಿಗೆ ಸಂಸದ ಇ.ತುಕಾರಾಮ್, ಮಾಜಿ ಸಚಿವ ನಾಗೇಂದ್ರ ಮತ್ತು ಅವರ ಆಪ್ತ ಕಾರ್ಯದರ್ಶಿ (ಪಿಎ) ಗೋವರ್ಧನ್, ಶಾಸಕ ಭರತ್ ರೆಡ್ಡಿ, ಶಾಸಕ ಎನ್.ಟಿ.ಶ್ರೀನಿವಾಸ್ ಮತ್ತು ಕಂಪ್ಲಿ ಗಣೇಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳು ಹಾಗೂ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.


ಎಂಟು ತಂಡಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು. ಶಾಸಕರು ಹಾಗೂ ಸಂಸದರ ನಿವಾಸ ಹಾಗೂ ಗೃಹ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ.


ಯಾರ್ಯಾರ ಮನೆ ಮೇಲೆ ದಾಳಿ:


ಬಳ್ಳಾರಿ ಲೋಕಸಭಾ ಸಂಸದ ತುಕಾರಾಂ (ಸಂಡೂರು), ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ, ಕಂಪ್ಲಿ ಶಾಸಕ ಗಣೇಶ, ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಕಚೇರಿ, ಮನೆ ಮೇಲೆ ಇಡಿ ದಾಳಿ ನಡೆಸಿದೆ. ಕೂಡ್ಲಿಗಿ ಶಾಸಕರ ಮನೆ ಮೇಲೆ ಇಡಿ ದಾಳಿ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಹುಟ್ಟೂರು ನರಸಿಂಹನಗಿರಿ ಗ್ರಾಮದ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಎರಡು ಕಾರುಗಳಲ್ಲಿ ಮೂವರು ಪುರುಷರು, ಒಬ್ಬರು ಮಹಿಳಾ ಅಧಿಕಾರಿಗಳು ನಾಲ್ವರು ಭದ್ರತಾ ಸಿಬ್ಬಂದಿಯೊಂದಿಗೆ ಆಗಮಿಸಿ ದಾಖಲೆ ಪತ್ರ, ಮೊಬೈಲ್ ಸೇರಿದಂತೆ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.


ಇಡಿ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಮನೆಯಲ್ಲಿ ಇರಲಿಲ್ಲ. ಶಾಸಕರ ತಾಯಿ ಮಾತ್ರ ಇದ್ದರು. ಬೆಳಗ್ಗೆ ೫ ಗಂಟೆಯಿಂದ ಮಾಹಿತಿಗಾಗಿ ಅಧಿಕಾರಿಗಳು ಇನ್ನೂ ತಲಾಶ್ ನಡೆಸುತ್ತಿದ್ದಾರೆ.


ಏನಿದು ವಾಲ್ಮೀಕಿ ಹಗರಣ:


ವಾಲ್ಮೀಕಿ ಹಗರಣವು ೨೦೨೪ ರಲ್ಲಿ ಕರ್ನಾಟಕದಲ್ಲಿ ಬೆಳಕಿಗೆ ಬಂದ ಒಂದು ದೊಡ್ಡ ಆರ್ಥಿಕ ವಂಚನೆ ಹಗರಣವಾಗಿದೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್. ಪಿ (೫೨) ವಾಲ್ಮೀಕಿ ನಿಗಮದ ಅನುದಾನದ ಹಣವು ದುರುಪಯೋಗವಾಗಿದೆ ಎಂದು ಆರೋಪಿಸಿ, ಮೇ ೨೬ ರಂದು ೫ ಪುಟಗಳ ಡೆತ್ ನೋಟ್ ಬರೆದುಬಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪತ್ನಿಯು ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಜತೆಗೆ ನಿಗಮದಲ್ಲಿ ಅನುದಾನ ಹಣವು ಬ್ಯಾಂಕ್ ಮೂಲಕ ದುರ್ಬಳಕೆಯಾಗಿರುವುದಾಗಿ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.


ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಅವರ ಪಾತ್ರವಿಲ್ಲ ಎಂದು ಎಸ್‌ಐಟಿ ತನಿಖೆ ನಡೆಸಿ ವರದಿ ನೀಡಿತ್ತು. ಆದರೆ ಹಣ ವರ್ಗಾವಣೆ ನೆರೆ ರಾಜ್ಯಕ್ಕೂ ವಿಸ್ತರಿಸಿದ್ದರಿಂದ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ನಡುವೆಯೂ ಇಡಿ ಕೂಡ ತನಿಖೆಗೆ ಮುಂದಾಗಿತ್ತು.


ಹಣ ಹಂಚಿ ತುಕಾರಾಂ ಗೆಲುವು


ನನ್ನ ಎದುರು ಗೆಲುವು ಅಸಾಧ್ಯ ಎಂದು ಮತದಾರರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಂಚನೆ ಮಾಡಿದ ಹಣವನ್ನು ಹಂಚಿ ತುಕರಾಂ ಗೆದ್ದಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.


ಮಕ್ಕಳಿಗೆ ಬಡವರಿಗೆ ತಲುಪಬೇಕಾದ ಹಣವನ್ನು ಕದ್ದು ಮತದಾರರಿಗೆ ಹಂಚಿದ ಬಗ್ಗೆ ಶಾಸಕ ನಾಗೇಂದ್ರ ಅವರ ಆಪ್ತ ವಿಜಯಕುಮಾರ್ ಬರೆದಿಟ್ಟಿದ್ದ ಡೈರಿನಿಂದಲೇ ತಿಳಿದಿದೆ. ಹಾಗಾಗಿ ಇಡಿ ದಾಳಿ ನಡೆದಿದೆ. ಇವರ ಅಕ್ರಮ ಇಡಿ ಮೂಲಕ ಬಯಲಿಗೆ ಬರಬೇಕು ಎಂದರು.

ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು


ಕಾಂಗ್ರೆಸ್ ಸಂಸದರ ಮತ್ತು ಶಾಸಕರ ಮನೆ ಮೇಲೆ ಜಾರಿ ನಿರ್ದೇಶನಾಲಯ ನಡೆಸಿರುವ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಡಿ ದಾಳಿಯಲ್ಲಿ ಕಾನೂನಿನ ಉಲ್ಲಂಘನೆಯಾಗಿದ್ದರೆ ಅದಕ್ಕೆ ನಾವು ಬೆಂಬಲ ನೀಡುವುದಿಲ್ಲ. ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಕಾನೂನಿನ ಅನುಷ್ಠಾನಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಡಿ ದಾಳಿಗೆ ಖರ್ಗೆ ಆಕ್ರೋಶ


ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ಶಾಸಕರನ್ನು ಗುರಿಯಾಗಿಸಿ ಜಾರಿ ನಿರ್ದೇಶನಾಲಯ ಮೂಲಕ ದಾಳಿ ಮಾಡಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.


ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮೊದಲಿನಿಂದಲೂ ಸಿಟ್ಟಿದೆ. ಜಾರಿ ನಿರ್ದೇಶನಾಲಯ ದಾಳಿಯ ಮೂಲಕ ಕಾಂಗ್ರೆಸ್ ಗೆ ತೊಂದರೆ ಮಮಾಡಬೇಕು ಎಂಬ ಉದ್ದೇಶವಿದೆ ಎಂದು ದೂರಿದ್ದಾರೆ.


ಕಾಂಗ್ರೆಸ್ ಸಂಸದ, ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಟಾರ್ಚರ್ ಕೊಟ್ಟರೆ ಪಕ್ಷ ಇಬ್ಬಾಗ ಆಗುತ್ತೆ ಅನ್ನೋ ಉದ್ದೇಶ ಇರಬೇಕು. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಹೇಳಿದ್ದಾರೆ.


ಯಾವ ಕಾರಣಕ್ಕೆ ದಾಳಿಯಾಗಿದೆ ಅನ್ನೋದು ಜಾರಿ ನಿರ್ದೇಶಬಾಲಯದ ಮಂದಿಗೆ ಗೊತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ಇದೇನು ಹೊಸದಲ್ಲ. ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳ ಹಣ ಸೀಸ್ ಮಾಡಿದ್ದರು. ಇಡೀ ಜತ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಸಂಸದ ಇ ತುಕಾರಾಮ ಹಾಗೂ ಶಾಸಕರಾದ ನಾರಾ ಭರತ್ ರೆಡ್ಡಿ ಕಂಪನಿ ಗಣೇಶ್ ಹಾಗೂ ಡಾ. ಶ್ರೀನಿವಾಸ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.