
ಮುಳಬಾಗಿಲು,ಡಿ,೬-ತಾಲೂಕಿನಲ್ಲಿ ಕಳೆದೊಂದು ವರ್ಷ ಅವಧಿಯಲ್ಲಿ ದ್ವಿಚಕ್ರ ವಾಹನಗಳ ರಸ್ತೆ ಅಫಘಾತಗಳಲ್ಲಿ ೫೦ ರಿಂದ ೬೦ ಸವಾರರು ಧಾರುಣವಾಗಿ ಮೃತಪಟ್ಟಿದ್ದಾರೆ ಇದರಿಂದ ನನ್ನ ಮನಸ್ಸಿಗೆ ತುಂಬ ನೋವಾಗಿದೆ ಎಂದು ಶಾಸಕ ಸಮೃದ್ದಿ ಮಂಜುನಾಥ್ ವಿಷಾಧಿಸಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಿ ಅವರು ಮಾತನಾಡಿ, ನಾನು ನಿಮ್ಮ ಕಾವಲುಗಾರ ನಿಮ್ಮ ಮತ ನನಗೆ ಮುಖ್ಯವಲ್ಲ, ನಿಮ್ಮ ಪ್ರಾಣವೇ ನನಗೆ ಮುಖ್ಯ, ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಧರಿಸಿ ತಮ್ಮ ಜೀವವನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ಪೊಲೀಸರು ಹಿಡಿದು ಕೊಂಡರೆ ನನಗೆ ಯಾರು ಸಹ ಬಿಡಿಸ ಬೇಕೆಂದು ಮೊಬೈಲ್ ಕರೆ ಮಾಡಬಾರದು ನಾನು ಸಹ ಈ ವಿಷಯದಲ್ಲಿ ರಾಜೀಯಾಗೋಲ್ಲ ಎಂದರು.
ಹೆಂಡತಿ ಮಕ್ಕಳು ಮತ್ತು ಪೋಷಕರ ಮುಖವನ್ನು ನೋಡಿ ತಪ್ಪದೇ ಹೆಲ್ಮೆಟ್‌ಗಳನ್ನು ಧರಿಸಬೇಕು, ಪೊಲೀಸ್ ಇಲಾಖೆ ಮಹತ್ತರವಾದ ಕೆಲಸ ಮಾಡಿದ್ದು, ಕಳೆದ ೧ ತಿಂಗಳಿನಿಂದ ಉಚಿತ ಹೆಲ್ಮೆಟ್ ವಿತರಣೆ ಕುರಿತು ಪ್ರಚಾರ ಮಾಡಲಾಗಿದೆ ಎಂದರು.
ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳ ಕಳವು ಪ್ರಕರಣಗಳು ನಡೆಯುತ್ತಿದ್ದು ಇದನ್ನು ಪತ್ತೆ ಹಚ್ಚಲು ೮ ರಿಂದ ೯ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಡುತ್ತೇನೆ ಜೊತೆಗೆ ಟ್ರಾಪಿಕ್ ಸಮಸ್ಯೆ ಬಗೆಹರಿಸಲು ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು ನಗರದ ಸ್ವಚ್ಚತೆಗೂ ಸಹ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.
ಕೋಲಾರ ಎಸ್.ಪಿ ಬಿ.ನಿಖಿಲ್ ಮಾತನಾಡಿ, ನಿಮ್ಮ ತಂದೆ ತಾಯಿ ಹೆಂಡತಿ ಮಕ್ಕಳ ಮೇಲೆ ಪ್ರೀತಿ ಇದ್ದರೆ ತಲೆಗೆ ಹೆಲ್ಮೆಟ್ ಧರಿಸದೇ ಹೊರಗೆ ಬರಬಾರದು ಎಂದರಲ್ಲದೆ, ಪೊಲೀಸರ ಭಯಕ್ಕೆ ಅಥವಾ ದಂಡಕ್ಕೆ ಎದರಿ ಹೆಲ್ಮೆಟ್ ಧರಿಸುವ ಬದಲು ನಿಮ್ಮ ಜೀವ ಕಾಪಾಡಲು ತಪ್ಪದೇ ಹೆಲ್ಮೆಟ್‌ಗಳನ್ನು ಧರಿಸಬೇಕೆಂದು ಮನವಿ ಮಾಡಿದರು.
ಶಾಸಕ ಸಮೃದ್ದಿ ಮಂಜುನಾಥ್ ತಾಲೂಕಿನ ಜನತೆಯ ಮೇಲೆ ಇರುವ ಕಾಳಜಿಯಿಂದ ಅವರೇ ವೈಯುಕ್ತಿಕವಾಗಿ ಹೆಲ್ಮೆಟ್‌ಗಳನ್ನು ಧಾರಳ ಮನಸ್ಸಿನಿಂದ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಅಪ್ರಾಪ್ತ ಬಾಲಕೀಯರ ಅನೇಕ ತೊಂದರೆಗಳನ್ನು ನಿವಾರಣೆ ಮಾಡಲು ಜನರಿ ತಿಂಗಳ ಮೊದಲನೇ ವಾರದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಶಾಸಕರ ಜೊತೆಗೂಡಿ ನಗರದಲ್ಲಿ ನಡೆಸಲಾಗುವುದು, ಒಂದು ವರ್ಷದಲ್ಲಿ ದ್ವಿಚಕ್ರವಾಹನಗಳ ಅಫಘಾತದಲ್ಲಿ ೧೫೨ ಜನ ನಿಧನ ಹೊಂದಿದ್ದಾರೆಂದು ಅಂಕಿ ಅಂಶ ನೀಡಿದರು.
ಎಎಸ್‌ಪಿ ಮನಿಷಾ, ಉಪತಹಸೀಲ್ದಾರ್ ಸಿ.ಸುಬ್ರಮಣಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸತೀಶ್ ಕುಮಾರ್, ಸಂಗನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿರೆಡ್ಡಿ, ಗೊಲ್ಲಹಳ್ಳಿ ಜಗದೀಶ್, ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಂಡಹಳ್ಳಿ ಲಕ್ಷ್ಮಿನಾರಾಯಣ್, ಪಿಎಸ್‌ಐಗಳಾದ ಅರುಣ್‌ಗೌಡ ಪಾಟೀಲ್, ವಿದ್ಯಾಶ್ರೀ, ಕಸಾಪ ತಾಯಲೂರು ಗೋಪಿನಾಥ್ ಇದ್ದರು.
.

































