
ಹುಳಿಯಾರು, ಡಿ. ೩೧- ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಹಣ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಾಮಿನೇಷನ್ ಇಲ್ಲದೆ, ವಾರಸುದಾರರು ಮುಂದೆ ಬಾರದ ಕಾರಣ ಬಳಕೆಯಾಗದೆ ಉಳಿದಿದ್ದಲ್ಲಿ, ಅಂತಹ ಹಣವನ್ನು ಸಂಬಂಧಪಟ್ಟ ವಾರಸುದಾರರಿಗೆ ಅಥವಾ ನಾಮಿನಿಗೆ ಮರಳಿಸಬೇಕೆಂಬ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿ ವೃದ್ಧಿ ಸಂಸ್ಥೆ ವತಿಯಿಂದ ಕೆಂಪರಾಯನ ಹಟ್ಟಿಯಲ್ಲಿ ಏರ್ಪಡಿಸಿದ್ದ ಕೇಂದ್ರ ಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಖಾತೆಗಳಿಗೆ ಸಂಬಂಧಿಸಿದವರು ಕೆವೈಸಿ ದಾಖಲೆಗಳೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕುಗಳಿಂದ ಹಣವನ್ನು ಹಿಂಪಡೆಯಬಹುದು ಎಂದು ಮಾಹಿತಿ ನೀಡಿದರು.
ತಾಲ್ಲೂಕು ಸಮನ್ವಯಾಧಿಕಾರಿ ಕವಿತಾ ಮಾತನಾಡಿ, ಗ್ರಾಹಕರ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳು ಅಕ್ರಮವಾಗಿ ತಡೆಹಿಡಿಯದೇ, ರಿಸರ್ವ್ ಬ್ಯಾಂಕ್ ರೂಪಿಸಿರುವ ಈ ವ್ಯವಸ್ಥೆಯ ಮೂಲಕ ನ್ಯಾಯಯುತವಾಗಿ ವಾರಸುದಾರರು ಅಥವಾ ನಾಮಿನಿಗೆ ಹಿಂತಿರುಗಿಸಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಈ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪರಾಯನಹಟ್ಟಿಯ ಚನ್ನಮ್ಮ ವಹಿಸಿದ್ದರು. ಸೇವಾ ಪ್ರತಿನಿಧಿ ಸಾವಿತ್ರಮ್ಮ ಸ್ವಾಗತಿಸಿ ವಂದಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಕ್ಕೆ ಸೇರಿದ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


























