
ನವದೆಹಲಿ, ಡಿ.೨೫- ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಗುರಿ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳು, ಮಾನವ ಸಂಪನ್ಮೂಲಕ್ಕೆ ಉತ್ತೇಜನ ಸೇರಿದಂತೆ ಇನ್ನಿತೆ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕ್ರೀಡೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಐದು ವಿಷಯಗಳಿಗೆ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.
ಮೂರು ದಿನಗಳ ಮ್ಯಾರಾಥಾನ್ ಸಭೆಯಲ್ಲಿ ನಿಯಮಗಳ ಸರಳೀಕರಣ ಮತ್ತು ವ್ಯವಹಾರದ ಸುಲಭತೆ ಉತ್ತೇಜನ, ಅನುಸರಣೆ ಹೊರೆ ಕಡಿಮೆ ಮಾಡುವ ಜೊತೆಗೆ ಪ್ರಗತಿಗೆ ಒತ್ತು ನೀಡುವ ವಿಷಯಗಳ ಕುರಿತು ದೆಹಲಿಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆಸುವ ಮೂರು ದಿನಗಳ ಮ್ಯಾರಥಾನ್ ಸಭೆಯಲ್ಲಿ ಚರ್ಚೆಯಾಗುವ ಮಹತ್ವದ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಕೇಂದ್ರದೊಂದಿಗೆ ಜೊತೆಯಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಐದನೇ ಶೃಂಗಸಭೆಯಾಗಿದ್ದು, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಈ ಮೂರು ದಿನಗಳ ಕಾಲ ಸ್ಥಳದಲ್ಲಿಯೇ ತಂಗಲಿದ್ದಾರೆ. ಸಭೆಗಳು, ಚರ್ಚೆಗಳು ಮತ್ತು ಗುಂಪು ಚರ್ಷೆ ನಡೆಯಲಿವೆ.
ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗಾಗಿ ಸರ್ಕಾರದ ನಿಯಂತ್ರಣ ಮುಕ್ತಗೊಳಿಸುವ ಅಭಿಯಾನದ ನೇತೃತ್ವ ವಹಿಸಿರುವ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಪ್ರಗತಿ ಮತ್ತು ಭವಿಷ್ಯದ ಮಾರ್ಗಸೂಚಿಯ ಕುರಿತು ಪ್ರಸ್ತುತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳು ಸಹ ಈ ವಿಷಯಗಳ ಕುರಿತು ವಿಚಾರ ಮಂಡಿಸಲಿವೆ. ಕೇರಳ ಉನ್ನತ ಶಿಕ್ಷಣದ ಕುರಿತು ಪ್ರಸ್ತುತಿ ನೀಡುವ ಸಾಧ್ಯತೆಯಿದ್ದರೆ, ತಮಿಳುನಾಡು ಕೌಶಲ್ಯ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯ ಕುರಿತು ವಿವರವಾದ ಪ್ರಸ್ತುತಿ ನೀಡುತ್ತದೆ. ಅದೇ ರೀತಿ, ರಾಜಸ್ಥಾನ ಲಖ್ಪತಿ ದೀದಿ’ ಯೋಜನೆ, ಶಾಲಾ ಶಿಕ್ಷಣ ಮತ್ತು ನಾವೀನ್ಯತೆಯನ್ನು ಬೆಳೆಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಹೂಡಿಕೆಯನ್ನು ಸುಗಮಗೊಳಿಸಲು ಉದ್ದೇಶಿಸಿರುವ ರಾಜ್ಯದ ಪ್ರಮುಖ ಉಪಕ್ರಮವಾದ ಐಸ್ಟಾರ್ಟ್ ಕುರಿತು ಮೂರು ಪ್ರಸ್ತುತಿಗಳನ್ನು ಮಾಡಲಿದೆ.
ತೆಲಂಗಾಣವು ‘ಎಡಪಂಥೀಯ ಉಗ್ರವಾದದ ನಂತರದ ಭವಿಷ್ಯ’ ಎಂಬ ಪ್ರಸ್ತುತಿಯನ್ನು ಮಾಡಲಿದೆ. ಶಿಕ್ಷಕರ ನೇಮಕಾತಿ ಮತ್ತು ಶಿಕ್ಷಕರ ಮತ್ತು ಪಿಎಚ್‌ಡಿ ಗುಣಮಟ್ಟದಲ್ಲಿನ ಸುಧಾರಣೆಯ ಕುರಿತು ಶಿಕ್ಷಣ ಸಚಿವಾಲಯ ವಿವರವಾದ ಮಾಹಿತಿ ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕ್ರೀಡಾ ಸಚಿವಾಲಯ ಶಾಲೆಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ಕ್ರೀಡೆಗಳ ಅಭಿವೃದ್ಧಿಯ ಕುರಿತು ಮಿಷನ್ ಮೋಡ್‌ನಲ್ಲಿ ಪ್ರಸ್ತುತಿ ನೀಡಲಿದೆ. ನೀತಿ ಆಯೋಗ ಆಡಳಿತದಲ್ಲಿನ ತಂತ್ರಜ್ಞಾನದ ವಿವರಗಳನ್ನು ಹಂಚಿಕೊಳ್ಳುತ್ತದೆ ಮತ್ತು ಪ್ರವಾಸೋದ್ಯಮವು ವಿಶ್ವ ದರ್ಜೆಯ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದೆ ಎಂದು ಹೇಳಲಾಗಿದೆ.

























