
ಕಲಬುರಗಿ,ಫೆ 18: ಅಳಂದ ಪಟ್ಟಣದ ಲಾಡ್ಲೆ ಮಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಇರುವ ಜಾಗದಲ್ಲಿ ನ್ಯಾಯಾಲಯ ಆದೇಶ ಉಲ್ಲಂಘಿಸಿ, ಅಲ್ಲಿ ಮಜರ್ ಇತ್ತು ಎಂದು ಬಿಂಬಿಸುವ ಹೊಸ ಪ್ರಯತ್ನ ನಡೆದಿದೆ ಎಂದು ಶಿವಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ಅವರು ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಘವ ಚೈತನ್ಯ ಶಿವಲಿಂಗ ಇರುವ ಸುತ್ತಲಿನ ಜಾಗದಲ್ಲಿನ ಗಿಡ ಮರಗಳನ್ನು ಕತ್ತರಿಸಲಾಗಿದೆ.ಅಲ್ಲಿ ಕಟ್ಟೆಯೊಂದನ್ನು ನಿರ್ಮಿಸಿ ಚಾದರ್ ಹೊದಿಸಿ ಅಲ್ಲೊಂದು ಮಜಾರ್ ಇತ್ತು ಎಂದು ಬಿಂಬಿಸುವ ಹೊಸ ಪ್ರಯತ್ನ ನಡೆದಿದೆ. ಇಲ್ಲಿ ಮುಸ್ಲಿಂಮರಾಗಲಿ,ಹಿಂದೂಗಳಾಗಲಿ ತಾತ್ಕಾಲಿಕ ಅಥವಾ ಶಾಶ್ವತ ಕಟ್ಟಡ ನಿರ್ಮಿಸಬಾರದು ಎಂಬ ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದರು.
ಈ ಕುರಿತು ದೂರು ಸಲ್ಲಿಸಲು ಹೋದಾಗ ಪೊಲೀಸರು ದೂರು ಸ್ವೀಕರಿಸಿಲ್ಲ.ಒಂದು ಕೋಮು ಓಲೈಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಗುರುಶಾಂತ ಟೆಂಗಳಿ,ರಾಕೇಶ ಜಮಾದಾರ,ಮಲಕಣ್ಣ ಹಿರೇ ಪೂಜಾರಿ,ಪ್ರದೀಪ ಹೆರೂರ ಇದ್ದರು.



























