ಬೆಂಗಳೂರು,ಆ.೯;ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸೇರಿದಂತೆ ದೇಶದ ಹೊಸದಾಗಿ ಮೂರು ವಂದೇ ಭಾರತ್ ರೈಲು ಮತ್ತು ನಮ್ಮ ಮೆಟ್ರೊದ ಹಳದಿ ಮಾರ್ಗ ಉದ್ಘಾಟನೆ ಹಾಗೂ ಮೆಟ್ರೊ ೩ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನನಿಲ್ದಾಣಕ್ಕೆ ಬೆಳಿಗ್ಗೆ ೧೦.೩೦ಕ್ಕೆ ಬಂದಿಳಿಯುವ ಪ್ರಧಾನಿ ಮೋದಿ ಅವರು ವಿಮಾನನಿಲ್ದಾಣದಿಂದ ಬೆಂಗಳೂರಿನ ಮೇಖ್ರಿ ವೃತ್ತದ ಬಳಿ ಇರುವ ವಾಯು ಪಡೆಯ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುವರು.
ಅಲ್ಲಿಂದ ಬೆಳಿಗ್ಗೆ ೧೧.೩೦ಕ್ಕೆ ರಸ್ತೆ ಮಾರ್ಗವಾಗಿ ೧೧.೧೦ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುವರು. ಹಾಗೆಯೇ ವರ್ಚುಯಲ್ ಮೂಲಕ ಅಮೃತಸರ ಶ್ರೀಮಾತಾ ವೈಷ್ಣೋದೇವಿ ಕಟ್ರಾ ರೈಲು ನಿಲ್ದಾಣ,ನಾಗಪುರ-ಪುಣೆ ನಡುವಿನ ವಂದೇ ಭಾರತ್ ರೈಲು ಸೇವೆಗೂ ಚಾಲನೆ ನೀಡುವರು. ಇದಾದ ಬಳಿಕ ಬೆಳಿಗ್ಗೆ ೧೧.೩೦ಕ್ಕೆ ರಸ್ತೆ ಮೂಲಕ ಆರ್‌ವಿ ರಸ್ತೆಯ ರಾಗಿಗುಡ್ಡ ಮೆಟ್ರೊ ನಿಲ್ದಾಣಕ್ಕೆ ಆಗಮಿಸಿ ಮೆಟ್ರೊ ಹಳದಿ ಮಾರ್ಗ ಉದ್ಘಾಟಿಸಿ ಮೆಟ್ರೊ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯವರೆಗೂ ಸಂಚರಿಸುವರು.
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ಆಯೋಜಸಿರುವ ಕಾರ್ಯಕ್ರಮದಲ್ಲಿ ಮೆಟ್ರೊ ೩ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿ ಮಧ್ಯಾಹ್ನ ನವದೆಹಲಿಗೆ ವಾಪಸ್ ಆಗುವರು.
ಪ್ರಧಾನಿ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿದ್ದು, ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಪಾಟನ್ನು ಮಾಡಿದ್ದಾರೆ.
ಭವ್ಯ ಸ್ವಾಗತಕ್ಕೆ ಸಿದ್ಧತೆ
ಪ್ರಧಾನಿ ನರೇಂದ್ರಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಅವರಿಗೆ ಭವ್ಯಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು, ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್‌ಎಂಡ್ ವೃತ್ತ, ರಾಗಿ ಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೊ ನಿಲ್ದಾಣಗಳ ಬಳಿ ಹಾಗೂ ಹಳದಿ ಮಾರ್ಗದ ೧೬ ನಿಲ್ದಾಣಗಳಲ್ಲೂ ಬಿಜೆಪಿಯ ನೂರಾರು ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸುವರು.
ಹಳದಿ ಮಾಗ ೮ ಲಕ್ಷ ಜನರಿಗೆ ಅನುಕೂಲ
ನಮ್ಮ ಮೆಟ್ರೊ ಹಳದಿ ಮಾರ್ಗದ ಉದ್ಘಾಟನೆಯಿಂದ ಸುಮಾರು ೮ ಲಕ್ಷ ಮೆಟ್ರೊ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಅಲ್ಲದೆ ಸಿಲ್ಕ್‌ಬೋರ್ಡ್ ಸೇರಿದಂತೆ ಎಲೆಕ್ಟ್ರಾನಿಕ್ ಸಿಟಯವರೆಗಿನ ಸಂಚಾರ ದಟ್ಟಣೆ ಸಮಸ್ಯೆಗೂ ಇದರಿಂದ ಬಹುಮಟ್ಟಿಗೆ ಪರಿಹಾರ ಸಿಗಲಿದೆ.
ಆರಂಭದಲ್ಲಿ ಪ್ರತಿ ಅರ್ಧ ಗಂಟೆಗೆ ಒಂದು ಮೆಟ್ರೊ ರೈಲು ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಬೋಗಿಗಳನ್ನು ಹೆಚ್ಚಾಗಿ ತರಿಸಿಕೊಂಡ ನಂತರ ಈ ಮಾರ್ಗದಲ್ಲೂ ಮೆಟ್ರೊ ರೈಲು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಲಿದೆ.
ಹಳದಿ ಮಾರ್ಗ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಇರಲಿದ್ದು, ೧೬ ನಿಲ್ದಾಣಗಳು ಈ ಮಾರ್ಗದಲ್ಲಿ ಇವೆ. ಈ ಮಾರ್ಗದ ಉದ್ದ ಸುಮಾರು ೧೯ ಕಿ.ಮೀ ಇದೆ.
ಹಳದಿ ಮಾರ್ಗದ ಉದ್ಘಾಟನೆಯಿಂದ ಬೆಂಗಳೂರಿನಲ್ಲಿ ಮೆಟ್ರೊ ಜಾಲ ೯೬ ಕಿ.ಮೀ.ಗೆ ವಿಸ್ತಾರವಾಗಲಿದೆ. ಹಳದಿ ಮಾರ್ಗದಲ್ಲಿ ಕನಿಷ್ಠ ದರ ೧೦ ರೂ. ಇದ್ದು, ಗರಿಷ್ಠ ದರ ೬೦ ರೂ.ಆಗಿದೆ.
ಬಹು ಬೇಡಿಕೆಯ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಓಡಾಟದಿಂದ ರಾಜಧಾನಿ ಬೆಂಗಳೂರಿಗೆ ಕಲ್ಯಾಣ ಕರ್ನಾಟಕದಿಂದ ಸಂಪರ್ಕ ಜಾಲ ಮತ್ತಷ್ಟು ಹೆಚ್ಚಾದಂತಾಗಿದೆ.
ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿರುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಬುಧವಾರ ಹೊರತುಪಡಿಸಿ ವಾರz ಎಲ್ಲ ದಿನ ಸಂಚರಿಸಲಿದೆ.
ಪ್ರತಿದಿನ ಬೆಳಿಗ್ಗೆ ೫.೨೦ಕ್ಕೆ ಬೆಳಗಾವಿಯಿಂದ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ ೧.೫೦ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರಲಿದೆ.ಮಧ್ಯಾಹ್ನ ೨.೨೦ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ರೈಲು ರಾತ್ರಿ ೧೦.೪೦ಕ್ಕೆ ಬೆಳಗಾವಿ ತಲುಪಲಿದೆ.
ಈ ವಂದೇ ಭಾರತ್ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆಯಾಗಲಿದೆ.
ವಂದೇ ಭಾರತ್‌ನ ೨ನೇ ರೈಲು ಆ.೧೦ ರಂದು ಬೆಳಗ್ಗೆ ೧೧ ಗಂಟೆಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಜತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಉಪಸ್ಥಿತರಿರುವರು. ಈ ವಂದೇ ಭಾರತ್ ರೈಲುಗಾಡಿ ತುಮಕೂರಿಗೆ ೧೧.೪೫ಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಸ್ವಾಗತಿಸುವಂತೆ ಮಾಜಿ ಸಂಸದರಾದ ಜಿ.ಎಸ್.ಬಸವರಾಜು ಅವರು ಮನವಿ ಮಾಡಿದ್ದಾರೆ.




























