
ಉಡುಪಿ, ನ. ೨೮- ಉಡುಪಿಯ ಶ್ರೀಕೃಷ್ಣ ಮಠ ಇಂದು ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡರು.
ರೋಡ್ ಶೋ ಮುಗಿಸಿದ ಸಾವಿರಾರು ಜನರು ಪಾಲ್ಗೊಂಡಿದ್ದ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಮೋದಿಯವರು ಬಳಿಕ ಶ್ರೀಕೃಷ್ಣನ ದರ್ಶನ ಪಡೆದು ಪುರುಷೋತ್ತಮ ಯೋಗ ಎಂಬ ಭಗವತ್‌ಗೀತೆಯ ೧೮ನೇ ಅಧ್ಯಯನದ ಶ್ಲೋಕವನ್ನು ಪಠಿಸಿ ಕೃಷ್ಣನನ್ನು ಪ್ರಾರ್ಥಿಸಿದರು.
ಕೃಷ್ಣ ಮಠದಿಂದ ಗೀತಾ ಮಂದಿರಕ್ಕೆ ತೆರಳಿದ ಮೋದಿ ಮಠದ ಐವರು ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಚರ್ಚೆ ನಡೆಸಿದರು.
ಬಳಿಕ ಸ್ವಾಮೀಜಿಗಳು ಮೋದಿಯವರ ಹಣೆಗೆ ತಿಲಕವಿಟ್ಟು, ತುಳಸಿಮಣೆ ಏರಿದರು. ನಂತರ ಕನಕದಾಸರ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕನಕನ ಕಿಂಡಿಯ ಮೇಲಿರುವ ಶ್ರೀಕೃಷ್ಣನ ಮೂರ್ತಿಗೆ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪ್ರಧಾನಿಯವರ ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ನಂತರ ಮೋದಿಗೆ ಅಂಗಾರಕ ಅಕ್ಷತೆ ನೀಡಿ ಮಾಧ್ವ ಸಂಪ್ರದಾಯದ ತಿಲಕ ಹಂಚಲಾಯಿತು.
ಇದೇ ವೇಳೆ ಕನಕಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದ ಮೋದಿ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಪಡೆದರು.
ಪ್ರಧಾನಿ ಮೋದಿಯವರು ಪಠಿಸಿದ ಭಗವತ್ ಗೀತೆಯ ೧೫ನೇ ಅಧ್ಯಂiiನ ಅತ್ಯಂತ ವಿಶೇಷ ಮತ್ತು ಮಹತ್ವವುಳ್ಳದಾಗಿದೆ. ನಿನ್ನ ಕರ್ಮವನ್ನು ನೀನು ಮಾಡು. ಫಲಾಫಲದ ಚಿಂತೆ ಬಿಡು ಎಂಬ ಮಾತನ್ನು ಕುರುಕ್ಷೆತ್ರ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಗೆ ಹೇಳಿದ ಮಾತು. ಜಗತ್ ಆತ್ಮ ಪರಮಾತ್ಮನ ಕುರಿತು ಗುಡಾತತ್ವ ಜ್ಞಾನವನ್ನು ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ ಪಡೆಯಬಹುದು. ೧೫ನೇ ಅಧ್ಯಯನವನ್ನು ಅರ್ಥ ಮಾಡಿಕೊಂಡು ಪರಿಪೂರ್ಣತೆ ಕಾಣುತ್ತಾನೆ ಎಂಬುದು ಈ ಅಧ್ಯಯದ ಮಹತ್ವ.
ಮೋದಿ ಭರ್ಜರಿ ರೋಡ್ ಶೋ
ಇದಕ್ಕೂ ಮುನ್ನ ಉಡುಪಿಯ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಬಿಗಿ ಭದ್ರತೆ ನಡುವೆ ಉಡುಪಿ ನಗರದ ಬನ್ನೆಂಜ ವೃತ್ತದಿಂದ ಕಲ್ಸಂಕ ವೃತ್ತದವರೆಗೆ ಭರ್ಜರಿ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮ ಮೋದಿ ಪರ ಜೈಕಾರ ಹಾಕಿ ಪುಷ್ಪವೃಷ್ಟಿಮಾಡಿದರು.
ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಬೆಳಗಿನಿಂದಲೇ ಜನರು ರಸ್ತೆ ಇಕ್ಕೆಲಗಳಲ್ಲಿ ಜನರು ಕಾದು ನಿಂತಿದ್ದರು. ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಜನರು ವಾಹನ ಪಾರ್ಕಿಂಗ್ ಸ್ಥಳದಿಂದ ನಡೆದುಕೊಂಡೇ ತೆರಳಿದರು.
ರೋಡ್ ಶೋ ವೇಳೆ ಮೋದಿಯವರು ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದರು. ಕಟ್ಟಡಗಳ ಮೇಲೆ ನಿಂತು ತಮ್ಮ ನೆಚ್ಚಿನ ನಾಯಕನನ್ನು ಜನರು ಕಣ್ತುಂಬಿಕೊಂಡರು.
ರೋಡ್‌ಶೋ ಸಂದರ್ಭದಲ್ಲಿ ನಗರದ ವಿವಿಧೆಡೆ ನಿರ್ಮಿಸಿರುವ ವೇದಿಕೆಗಳಲ್ಲಿ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಬಿಗಿ ಪೊಲೀಸ್ ಭದ್ರತೆ:
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸುಮಾರು ೩೦೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ೧೦ ಮಂದಿ ಪೊಲೀಸ್ ಆಯುಕ್ತರು ಸೇರಿದಂತೆ ೮ಕ್ಕೂ ಹೆಚ್ಚು ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು.
ಭದ್ರತಾ ವ್ಯವಸ್ಥೆಗೆ ಎಸ್‌ಪಿಜಿ ತಂಡ ನೇತೃತ್ವ ವಹಿಸಿದ್ದು, ಅಲ್ಲಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಅವರೊಂದಿಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಬಂದೋಬಸ್ತ್ ವ್ಯವಸ್ಥೆ ಎಡಿಜಿಪಿ ಜಿತೇಂದ್ರ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ಐಜಿ ಸಂದೀಪ್ ಪಟೀಲ್ ಮತ್ತು ಐಜಿ ಚಂದ್ರಗುಪ್ತ ನೇತೃತ್ವದಲ್ಲಿ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ
ಕೇಸರಿಮಯವಾದ ಉಡುಪಿ
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಉಡುಪಿ ನಗರ ಕೇಸರಿ ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳಿಂದ ರಾರಾಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಣಲು ಜನರು ಕಾತರರಾಗಿದ್ದರು.




























