
ನವದೆಹಲಿ, ಜ.೧೬- ಬೆಂಗಳೂರು ಉಪನಗರ ರೈಲ್ವೆ ಯೋಜನೆ ಪ್ರಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದು ಇದರಿಂದ ಕಾಮಗಾರಿಗೆ ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.
ಉಪನಗರ ರೈಲು ಯೋಜನೆಗೆ ಮತ್ತಷ್ಟು ವೇಗ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಉಪ ನಗರ ರೈಲು ಯೋಜನೆಯ ಪ್ರಗತಿ ಸಭೆಯಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎರಡು ಮೆಗಾ ಯೋಜನೆಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.
ಉಪನಗರ ರೈಲು ಯೋಜನೆಗಳು ಹಲವು ವರ್ಷಗಳಿಂದ ವಿಳಂಬವಾಗುತ್ತಿದ್ದು, ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಈ ಯೋಜನೆಗಳಲ್ಲಿ ತ್ವರಿತ ಪ್ರಗತಿ ಸಾಧಿಸುವಂತೆ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ತೆಲಂಗಾಣದ ಜೆ ಚೊಕ್ಕಾ ರಾವ್ ದೇವದುಲ ಲಿಫ್ಟ್ ನೀರಾವರಿ ಯೋಜನೆಯನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯು ನಾಲ್ಕು ದಶಕಗಳಿಂದ ಚರ್ಚೆಯಲ್ಲಿದೆ. ಅಂತಿಮವಾಗಿ ಇದನ್ನು ೨೦೨೦ ರಲ್ಲಿ ಮಂಜೂರು ಮಾಡಲಾಯಿತು. ೨೦೨೩ ರಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಇನ್ನೂ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ.
ಈ ಯೋಜನೆಯು ನಗರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆಯು ನಗರ, ಉಪನಗರಗಳು ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಾಲ್ಕು ಕಾರಿಡಾರ್‌ಗಳಲ್ಲಿ ಸುಮಾರು ೧೪೮ ಕಿ.ಮೀ.ಗಳನ್ನು ವ್ಯಾಪಿಸಿದೆ




























