
ಕೋಲ್ಕತ್ತಾ,ನ.೫-ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ (ಸರ್) ಕುರಿತು ಮಂಗಳವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ಹರಿಹಾಯ್ದಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಒಂದೇ ಒಂದು ಮತದಾರರ ಹೆಸರನ್ನು ತೆಗೆದುಹಾಕಿದರೆ, ನರೇಂದ್ರ ಮೋದಿ ಸರ್ಕಾರದ ಪತನ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.
ಒಂದೇ ಒಂದು ಮಾನ್ಯ ಮತದಾರರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ ಎಂದು ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ರನ್ನು ಮೂಕ, ಅದೃಶ್ಯ ವಂಚನೆ ಎಂದು ಕರೆದಿದ್ದಾರೆ.ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಪಕ್ಷವು ಸ್ಥಾಪಿಸಿರುವ ಸಹಾಯ ಶಿಬಿರಗಳನ್ನು ಉಲ್ಲೇಖಿಸುತ್ತಾ, ಮುಖ್ಯಮಂತ್ರಿ, ನಿಮ್ಮ ಬಳಿ ದಾಖಲೆಗಳಿಲ್ಲದಿದ್ದರೆ, ನಮ್ಮ ಶಿಬಿರಗಳಿಗೆ ಬನ್ನಿ. ನಾವು ಯಾವುದೇ ಬೆಲೆ ತೆತ್ತಾದರೂ ನಿಮಗೆ ಸಹಾಯ ಮಾಡುತ್ತೇವೆ. ಅಗತ್ಯವಿದ್ದರೆ, ನಿಮಗೆ ಸಹಾಯ ಮಾಡಲು ನಾವು ನಮ್ಮ ಪಾತ್ರೆಗಳನ್ನು ಸಹ ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಕೋಲ್ಕತ್ತಾದಲ್ಲಿ ಎಸ್‌ಐಆರ್ ವಿರುದ್ಧ ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಬೆಳಿಗ್ಗೆ ರೆಡ್ ರೋಡ್‌ನಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯಾದ ಜೋರಾಸಂಕೊ ಠಾಕೂರ್ಬರಿಯಲ್ಲಿ ಕೊನೆಗೊಂಡಿದೆ. ತ್ರಿವರ್ಣ ಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದ ಸಾವಿರಾರು ಟಿಎಂಸಿ ಕಾರ್ಯಕರ್ತರು ಪ್ರಜಾಪ್ರಭುತ್ವವನ್ನು ಉಳಿಸಿ ಮತ್ತು ಬಂಗಾಳದ ಮತ ಬಂಗಾಳದ ಹಕ್ಕು ಮುಂತಾದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆ ಮುಗಿದ ನಂತರ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ,ನಾವು ನಮ್ಮ ಹೋರಾಟವನ್ನು ಮುಂದುವರಿಸಬೇಕು ಕೇಂದ್ರ ಸಂಸ್ಥೆಗಳಿಗೆ ಭಯಪಡಬೇಡಿ. ಇದೆಲ್ಲವೂ ಚುನಾವಣೆಗಳಿಂದಾಗಿ ನಡೆಯುತ್ತಿದೆ. ಅಗತ್ಯವಿದ್ದರೆ ಕಾನೂನು ಸಹಾಯವನ್ನು ಪಡೆಯಿರಿ. ನಿಮ್ಮ ದೀದಿ ಇಲ್ಲಿದ್ದಾರೆ. ನಾನು ನಿಮ್ಮಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಅವರು ನಿಮ್ಮನ್ನು ಗಡೀಪಾರು ಮಾಡಲು ಬಲಪ್ರಯೋಗ ಮಾಡಿದರೆ, ಇನ್ನೂ ಅನೇಕರು ಬಲಪ್ರಯೋಗವನ್ನು ಎದುರಿಸಬೇಕಾಗುತ್ತದೆ. ಅಲ್ಪಸಂಖ್ಯಾತರು ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.





























