ಭೈರಪ್ಪ ನಿಧನಕ್ಕೆ ಮೋದಿ, ಸಿಎಂ ಸೇರಿ ಗಣ್ಯರ ಕಂಬನಿ

ನವದೆಹಲಿ, ಸೆ.24- ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕ್ತಿತ್ವವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಭೈರಪ್ಪ, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು ಎಂದು ಗುಣಗಾನ ಮಾಡಿದ್ದಾರೆ.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.” ಎಂದು ಕನ್ನಡದಲ್ಲಿ ಸಂತಾಪ ಸೂಚಿಸಿದ್ದಾರೆ.

ಸಿಎಂ ಸಂತಾಪ

ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ
ತಮ್ಮ‌ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಎಚ್ ಡಿಕೆ ಸಂತಾಪ
ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಸರಸ್ವತಿ ಸಮ್ಮಾನ ಪುರಸ್ಕೃತರು, ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಕಂಬಿನಿ‌ ಮಿಡಿದಿದ್ದಾರೆ.

ಬಿಎಸ್ ವೈ ಸಂತಾಪ

ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಹಿರಿಯ ಸಾಹಿತಿ ಭೈರಪ್ಪ‌ ಅವರನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾ ದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ, ಸಾರಸ್ವತ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಎಂದು ಮಾಜಿ ಮುಖ್ಯಮಂತ್ತಿ ಬಿ;ಎಸ್.ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.
ಹಿರಿಯ ಸಾಹಿತಿ ಎಸ್.ಎಲ್. ಬೈರಪ್ಪ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಡಿಕೆಶಿ ಕಂಬನಿ

ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರರು, ತತ್ವಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ಎಲ್. ಬೈರಪ್ಪ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

“ಕನ್ನಡ ಹಾಗೂ ದೇಶದ ಸಾಹಿತ್ಯ ಲೋಕದ ಕೊಂಡಿಯಾಗಿದ್ದ ಅವರು ತಮ್ಮ ಕಾದಂಬರಿಗಳಿಂದ ಬೃಹತ್ ಓದುಗ ವರ್ಗವನ್ನೇ ಸೃಷ್ಠಿಸಿಕೊಂಡಿದ್ದರು. ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತೀಯ ಇತರೆ ಭಾಷೆಗಳಿಗೆ ಇವರ ಕಾದಂಬರಿಗಳು ಅನುವಾದಗೊಂಡು ಸಾಕಷ್ಟು ಪ್ರಸಿದ್ಧಿ ಪಡೆದಿದ್ದವು. ನಾಲ್ಕು ದಶಕಗಳಲ್ಲಿ ಅನೇಕ ಕಾದಂಬರಿಗಳನ್ನು ರಚಿಸಿದ್ದರು. ಇವರ ಬರಹ ನಡೆ, ನುಡಿ ಸಾಹಿತ್ಯ ಲೋಕದಲ್ಲಿ ಸದಾ ಚರ್ಚೆಗೆ ಒಳಗಾಗುತ್ತಿತ್ತು ಎಂದಿದ್ದಾರೆ.