Home ಮುಖಪುಟ ಸುದ್ದಿ ಪ್ರಜ್ವಲ್ ಬಳಿ ಮೊಬೈಲ್ ಪತ್ತೆ: ಎಫ್‌ಐಆರ್ ದಾಖಲು

ಪ್ರಜ್ವಲ್ ಬಳಿ ಮೊಬೈಲ್ ಪತ್ತೆ: ಎಫ್‌ಐಆರ್ ದಾಖಲು

ಬೆಂಗಳೂರು,ಆ. ೧೨: ಪರಪ್ಪನ ಅಗ್ರಹಾರದಲ್ಲಿರುವ ಪ್ರಸಿದ್ಧ ಕೇಂದ್ರ ಕಾರಾಗೃಹದ ಹೈ-ಸೆಕ್ಯೂರಿಟಿ ಬ್ಯಾರಕ್ ಮೇಲೆ ಸಿಸಿಬಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಮಾಜಿ ಸಂಸದ, ಶಿಕ್ಷೆಗೆ ಒಳಗಾಗಿರುವ ಕೈದಿ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾ ಕೈದಿ ಪ್ರತಾಪ್ ರಾಯ್ ಬಳಿ ನಿಷೇಧಿತ ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರ (ಅಪರಾಧ) ಆದೇಶದ ಮೇರೆಗೆ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಲ್. ಸುಬ್ರಮಣ್ಯ ಸ್ವಾಮಿ ಹಾಗೂ ಸಿಬ್ಬಂದಿಗಳ ತಂಡ ಆಗಸ್ಟ್ ೧೧ರ ಮಧ್ಯಾಹ್ನ ೨:೦೫ ರಿಂದ ರಾತ್ರಿ ೯:೦೦ ಗಂಟೆಯವರೆಗೆ ಜೈಲಿನ ಭದ್ರತಾ ವಿಭಾಗ ೧ ರಿಂದ ೩ ರವರೆಗೆ ಕಟ್ಟುನಿಟ್ಟಿನ ಶೋಧ ಕಾರ್ಯ ನಡೆಸಿದೆ.

ಭದ್ರತಾ ವಿಭಾಗ ೩ ರ ೧ನೇ ಮಹಡಿಯ ರೂಂ ನಂಬರ್ ೦೪ ರಲ್ಲಿ ಶೋಧನೆ ನಡೆಸಿದಾಗತಿಳಿ ನೀಲಿ ಬಣ್ಣದ ಮೊಬೈಲ್ ಫೋನ್ ಬಿಳಿ ಬಣ್ಣದ ಚಾರ್ಜರ್‌ಒಂದು ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್‌ಕಪ್ಪು ಬಣ್ಣದ ಪೆನ್‌ಡ್ರೈವ್ ಪತ್ತೆಯಾಗಿವೆ

ರೂಮ್‌ನಲ್ಲಿದ್ದ ಕೈದಿಗಳನ್ನು ವಿಚಾರಣೆ ನಡೆಸಿದಾಗ, ಪ್ರಜ್ವಲ್ ರೇವಣ್ಣ (ಂ೨) ಅವರು ನೀಲಿ ಬಣ್ಣದ ನೋಟ್‌ಬುಕ್ ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಇನ್ನು ವಿಚಾರಣಾ ಕೈದಿ ಪ್ರತಾಪ್ ರಾಯ್ (ಂ೧) ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್‌ಡ್ರೈವ್ ತಮ್ಮದೆಂದು ತಿಳಿಸಿದ್ದು, ಈ ಫೋನ್ ಮೂಲಕ ನಿಯಮಿತವಾಗಿ ಸಂಬಂಧಿಕರು ಹಾಗೂ ವಕೀಲರಿಗೆ ಕರೆ ಮಾಡುತ್ತಿದ್ದುದಾಗಿ ಹೇಳಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣ ಕೂಡ ತಮ್ಮ ಬಳಿಯಿಂದ ಫೋನ್ ಪಡೆದು ವಕೀಲರು ಹಾಗೂ ಸಂಬಂಧಿಕರ ಜೊತೆ ಮಾತನಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.

ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋ ಆಪ್‌ಗಳು ಡೌನ್‌ಲೋಡ್ ಆಗಿದ್ದು, ಇವೆಲ್ಲವೂ ಪಾಸ್‌ವರ್ಡ್‌ನಿಂದ ಲಾಕ್ ಆಗಿದ್ದವು. ಈ ಕುರಿತು ಅಧಿಕಾರಿಗಳು ಪ್ರಶ್ನಿಸಿದಾಗ ಇಬ್ಬರೂ ಕೈದಿಗಳು ಪಾಸ್‌ವರ್ಡ್ ತಿಳಿಸಲು ನಿರಾಕರಿಸಿದ್ದಾರೆ.

ಕಾರಾಗೃಹದೊಳಗೆ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ತರಿಸಿಕೊಂಡು ಬಳಸಿದ್ದಕ್ಕಾಗಿ ಹಾಗೂ ತನಿಖೆಗೆ ಸಹಕರಿಸದ ಕಾರಣಕ್ಕಾಗಿ ಇಬ್ಬರೂ ಆರೋಪಿಗಳ ವಿರುದ್ಧ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ-೨೦೨೨ ರ ಸೆಕ್ಷನ್ ೪೨ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೩೨೩ ರ ಅಡಿಯಲ್ಲಿ ಎಫ್‌ಐಆರ್ (ಅಖ ಓo: ೩೧೯/೨೦೨೬) ದಾಖಲಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಮತ್ತು ಮಹಜರ್ ಪ್ರತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.