ಹುಳಿಯಾರು, ಅ. ೨೫- ಪಟ್ಟಣದ ಪಶು ಆಸ್ಪತ್ರೆಯ ಮುಂಭಾಗ ಪಿಡ್ಬ್ಯೂಡಿ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ರೈತರು ಒಪ್ಪಿದರೆ ಎಪಿಎಂಸಿಗೆ ಸ್ಥಳಾಂತರಿಸಲು ನನ್ನ ಅಭ್ಯಂತರ ಇಲ್ಲ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯ್ತಿ ಮುಂದೆ ಹೊಸಹಳ್ಳಿ ಚಂದ್ರಣ್ಣ ಬಣದ ರೈತ ಸಂಘದಿಂದ ಸಂತೆ ಮೈದಾನ ಸ್ಥಳಾಂತರ ಹಾಗೂ ಕಸ ವಿಲೇವಾರಿ ಘಟಕಕ್ಕೆ ಭೂಮಿ ನೀಡುವಂತೆ ಆಗ್ರಹಿಸಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರಿಗೆ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಹಶೀಲ್ದಾರ್ ಕೆ.ಪುರಂದರ ಅವರು ಸಂತೆ ನಡೆಯಲು ಎಪಿಎಂಸಿಯಲ್ಲಿ ಸೂಕ್ತ ಭೂಮಿ ಲಭ್ಯವಿರುವ ಬಗ್ಗೆ ಶಾಸಕರಿಗೆ ತಿಳಿಸಿದರು. ಆಗ ಎಪಿಎಂಸಿ ಡಿಡಿ ರಾಜಣ್ಣ ಅವರಿಗೆ ಶಾಸಕರು ದೂರವಾಣಿ ಕರೆ ಮಾಡಿ ಎಪಿಎಂಸಿಯಲ್ಲಿ ಜಾಗ ಇದ್ದರೂ ಇಲ್ಲವೆಂದು ರೈತರ ದಾರಿ ತಪ್ಪಿಸುತ್ತಿರುವ ಬಗ್ಗೆ ಖಾರವಾಗಿ ಪ್ರಶ್ನಿಸಿದರು. ಅದಕ್ಕೆ ಡಿಡಿ ಅವರು ತಹಶೀಲ್ದಾರ್ ಅವರು ನೋಡಿರುವ ಜಾಗ ಕೋಲ್ಡ್ ಸ್ಟೋರೇಜ್‌ಗೆ ಮೀಸಲಿರಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ತರಕಾರಿ ಬೆಳೆಯುವ ಪ್ರದೇಶದ ಎಪಿಎಂಸಿಗಳಲ್ಲೇ ಇಲ್ಲದ ಕೋಲ್ಡ್ ಸ್ಟೋರೇಜ್ ಹುಳಿಯಾರಿಗೆ ಏಕೆ ಎಂದು ಪ್ರಶ್ನಿಸಿ, ತಹಶೀಲ್ದಾರ್ ಅವರ ವರದಿ ಆಧರಿಸಿ ತಾವೂ ಕೂಡಾ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ನನಗೆ ತಿಳಿಸಿ ನಂತರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಸಂತೆಗೆ ಜಾಗ ಮಂಜೂರು ಮಾಡಿಸಿಕೊಳ್ಳುತ್ತೇವೆ ಎಂದರು.
ನಂತರ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಲಭ್ಯತೆಯ ಬಗ್ಗೆ ತಹಶೀಲ್ದಾರ್ ಅವರಿಂದ ಶಾಸಕರು ಮಾಹಿತಿ ಕೇಳಿದಾಗ ಸರ್ಕಾರಿ ಭೂಮಿ ಲಭ್ಯವಿಲ್ಲ. ಕಾರೇಹಳ್ಳಿ ಬಳಿ ಖಾಸಗಿ ಭೂಮಿಯನ್ನು ಕೊಡಲು ರೈತರೊಬ್ಬರು ಮುಂದೆ ಬಂದಿದ್ದು ಸ್ಥಳ ಪರಿಶೀಲನೆ ಮಾಡಿ, ಭೂ ಒಡೆತನದ ದಾಖಲಾತಿಗಳನ್ನು ಪರಿಶೀಲಿಸಿ ಖರೀದಿ ಮಾಡಲಾಗುವುದು. ಮೊದಲ ಆದ್ಯತೆ ಕೊಟ್ಟು ಕಸದ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ರೈತ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಟಿ.ಎಸ್.ಪ್ರಶಾಂತ್, ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಪ.ಪಂ. ಸದಸ್ಯ ಎಸ್‌ಆರೆಸ್ ದಯಾನಂದ್, ಪ.ಪಂ. ಮಾಜಿ ಸದಸ್ಯ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.




























