Home ಜಿಲ್ಲೆ ಮಹಾರಾಣಾ ಪ್ರತಾಪ್ ಸಿಂಹ ಮೂರ್ತಿ ಅನಾವರಣಗೊಳಿಸಿದ ಶಾಸಕ ಯತ್ನಾಳ

ಮಹಾರಾಣಾ ಪ್ರತಾಪ್ ಸಿಂಹ ಮೂರ್ತಿ ಅನಾವರಣಗೊಳಿಸಿದ ಶಾಸಕ ಯತ್ನಾಳ

ವಿಜಯಪುರ:ಮೇ.30: ನಗರದ ವಾರ್ಡ್ ನಂ.11 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಹಾಗೂ ಉದ್ಘಾಟನೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಬುಧವಾರ ನೆರವೇರಿಸಿದರು.

ವಿಜಯಪುರ ನಗರದ ವಾರ್ಡ್ ನಂ.11 ರಲ್ಲಿ ಬರುವ ಅಟಲ್ ಬಿಹಾರಿ ವಾಜಪೇಯಿ ಮಾರ್ಗದಲ್ಲಿ ಕೆ.ಬಿ.ಜೆ.ಎನ್.ಎಲ್ ವತಿಯಿಂದ ಎಸ್.ಸಿ.ಪಿ/ ಟಿ.ಎಸ್.ಪಿ ವಿಶೇಷ ಘಟಕ ಯೋಜನೆಯಡಿ/ಗಿರಿಜನ ಉಪ ಯೋಜನೆಯಡಿ ಮಂಜೂರಿಸಲಾದ ರೂ.9 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕ, ರಾಷ್ಟ್ರ ವೀರ ಶ್ರೀ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಮಹಾರಾಣಾ ಪ್ರತಾಪ್ ಸಿಂಹ ಮೂರ್ತಿಯನ್ನು ಉದ್ಘಾಟಿಸಿದರು. ನಂತರ ಮಿನಿ ಮಾದರ ಓಣಿಯ ಶ್ರೀ ವಿಠೋಬಾ ಮಂದಿರ ಹತ್ತಿರ ಸನ್ 2025-26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಲಾದ ರೂ.10 ಲಕ್ಷ ಅನುದಾನ ದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಸಾರ್ವಜನಿಕರ ಅಹವಾಲು ಆಲಿಸಿದರು.

ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ವಿಠ್ಠಲ ಹೊಸಪೇಟೆ, ರಾಜಶೇಖರ ಕುರಿಯುವರ, ಮುಖಂಡರಾದ ಸಿದ್ದರಾಮಪ್ಪ ಉಪ್ಪಿನ, ಅಶೋಕ ಬೆಲ್ಲದ, ಬಾಬು ಶಿರಶ್ಯಾಡ, ಉಮೇಶ ವೀರಕರ, ಮಧು ಕಲಾದಗಿ, ವಿಜಯ ರಜಪೂತ, ಶಿವಲಿ ಸಾಳುಂಕೆ, ಬಲಭೀಮ ಸಾಳುಂಕೆ, ತಾನಾಜಿ ಸಾಳುಂಕೆ, ಸೋಮು ರಣದೇವಿ, ಗಣೇಶ ರಣದೇವಿ, ಪಾಂಡುರಂಗ, ಶಂಕರ ಚಲವಾದಿ, ಶ್ರೀಶೈಲ ದೇವರ ಮತ್ತಿತರರು ಇದ್ದರು.