ಶಾಸಕ ವಿನಯ್ ಕುಲಕರ್ಣಿ ಕೋರ್ಟ್‌ಗೆ ಶರಣಾಗತಿ ಸಿಬಿಐ ವಶಕ್ಕೆ

ಬೆಂಗಳೂರು,ಜೂ.೧೩-ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಇಂದು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾಗಿದ್ದು, ಕೋರ್ಟ್ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.


ಕಳೆದ ೨೦೧೬ ರ ಜೂ. ೧೫ ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದ ಯೋಗೀಶಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್‌ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು.


ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ಅವರನ್ನು ೨೦೨೦ ನವೆಂಬರ್ ೫ ರಂದು ಸಿಬಿಐ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು.


ಸೇವೆ ಜನರ ಮನದಲ್ಲಿದೆ:


ಇನ್ನು ಇತ್ತೀಚೆಗೆ ಧಾರವಾಡದ ಸಮೀಪದ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾಡಿದ್ದ ವಿನಯ್ ಕುಲಕರ್ಣಿ, ಇಷ್ಟು ವರ್ಷಗಳ ಕಾಲ ಕ್ಷೇತ್ರಕ್ಕಾಗಿ ನಾನು ಮಾಡಿದ ಕೆಲಸ ಹಾಗೂ ನೀಡಿದ ಸೇವೆ ಜನರ ಮನದಲ್ಲಿದೆ.

ಇದರಿಂದಲೇ ಕ್ಷೇತ್ರದ ಹೊರಗಿದ್ದರೂ ನಾನು ಶಾಸಕನಾಗಿದ್ದೇನೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದ ಹೊರಗಿದ್ದರೂ ಜನರು ನನ್ನನ್ನು ಭೇಟಿಯಾಗಲು ಹಾತೊರೆಯುತ್ತಾರೆ. ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ನನಗೆ ಕಷ್ಟ ಬಂದಿರಬಹುದು. ಆದರೆ, ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗದಂತೆ ಎಚ್ಚರ ವಹಿಸಿದ್ದೇನೆ ಎಂದು ಭಾವುಕರಾಗಿ ನುಡಿದ್ದರು.