ಯಾದಗಿರಿ,ಸೆ.೨೮: ಚಿತ್ತಾಪುರ ರಸ್ತೆ ಮೆಡಿಕಲ್ ಕಾಲೇಜಿಗೆ ಹೊಂದಿಕೊAಡಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಸಮಸ್ತ ಅವ್ಯವಸ್ಥೆ ಸರಿ ಪಡಿಸುವ ಮೂಲಕ ಜಿಲ್ಲೆಯ ಬಡರೋಗಿಗಳ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಗತ್ಯಕ್ರಮ ತೆಗೆದುಕೊಳ್ಳಿ ಎಂದು ಮೆಡಿಕಲ್ ಕಾಲೇಜಿನ ಡಿನ್ ಡಾ. ಸಂದೀಪ್ ಅವರಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಕಡಕ್ ಸೂಚನೆ ನೀಡಿದರು.
ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿದ ಶಾಸಕರು ಇಡಿ ಆಸ್ಪತ್ರೆಯ ತುಂಬಾ ಸಂಚರಿಸಿ, ವಿವಿಧ ವಾರ್ಡಗಳಲ್ಲಿನ ರೋಗಿಗಳಿಗೆ ಮಾತಾಡಿಸಿದಾಗ ಅಲ್ಲಿನ ಹದಗೆಟ್ಟ ವ್ಯವಸ್ಥೆಯ ಸತ್ಯ ದರ್ಶನ ಸಾಕ್ಷತ್ ಕಂಡ ಶಾಸಕರು ಇಷ್ಟೊಂದು ದಿವ್ಯ ನಿರ್ಲಕ್ಷ್ಯಕ್ಕೆ ಕಾರಣರಾದ ಎಲ್ಲರ ವಿರುದ್ದವೂ ಗರಂ ಆಗಿ, ನೇರವಾಗಿ ಡಿನ್ ಗೆ ದೂರವಾಣಿ ಮೂಲಕ ಮಾತಾಡಿ, ಅಲ್ಲಿನ ಅವ್ಯವಸ್ಥೆ ಬಗ್ಗೆ ಇಂಚಿAಚು ಮಾಹಿತಿ ನೀಡಿದರು. ವ್ಯವಸ್ಥೆ ಇಷ್ಟು ಹದಗೆಟ್ಟರೇ ಹೇಗೆ? ಸರ್ಕಾರ ಬಡವರ ಜೀವಗಳು ಉಳಿಯುವ ನಿಟ್ಟಿನಲ್ಲಿ ಎಲ್ಲ ಸೌಲಭ್ಯಗಳು ನೀಡಿ ಕೊಟ್ಯಾಂತರ ರೂ. ಖರ್ಚು ಮಾಡಿದರೂ ಇಲ್ಲಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಸಂಬAಧಪಟ್ಟ ವೈದ್ಯರುಗಳೇ ಇಲ್ಲ. ಇದ್ದ ಸಿಸ್ಟರ್, ಬ್ರದರ್ ಗಳಿಗೆ ರೋಗಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲ, ಅನೇಕ ವಾರ್ಡಗಳು ಹೊಲಸು ವಾಸನೆ ಕೂಡಿವೆ.ಮಲ,ಮೂತ್ರ ಮಾಡುವ ಸ್ಥಳ ಸ್ವಚ್ಛ ಮಾಡದೇ ಎಷ್ಟು ತಿಂಗಳಾಗಿವೆ? . ಇದೆ ಏನ್ರಿ ವ್ಯವಸ್ಥೆ ಎಂದು ಅಲ್ಲಿಂದ ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು ತುಕ್ಕು ಹಿಡಿದ ಮಂಚ, ತೊಳೆಯದ ಶೌಚಾಲಯ, ಬೇಕಾದ ವೈದ್ಯರು, ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲದ್ದು ಕಂಡು ಹಾಗೂ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಸ್ಕ್ಯಾನಿಂಗ್ ಗೆ ಒಂದು ತಿಂಗಳು ಮುಂದಿನ ಡೆಟ್ ಕೊಟ್ಟಿದ್ದು ಹೀಗೆ ಅನೇಕರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಕೆಲಹೊತ್ತು ಬೆರಗಾದ ಶಾಸಕರು, ಇದೆಲ್ಲವನ್ನು ಡಿನ್ ಅವರಿಗೆ ದೂರವಾಣಿಯಲ್ಲಿಯೇ ವಿವರಿಸಿ ಕೂಡಲೇ ಸರಿ ಮಾಡಿಕೊಳ್ಳಿ ಎಂದು ಕಠಿಣ ಶಬ್ದಗಳಿಂದ ಎಚ್ಚರಿಸಿದರು.
ಈ ವೇಳೆ ಅನೇಕರು ಅಲ್ಲಿನ ಅವ್ಯವಸ್ಥೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ಪುರುಷ,ಮಹಿಳಾ ವಾರ್ಡಗಳು ಸೇರಿದಂತೆಯೇ ವಿವಿಧ ಸಂಚರಿಸಿ ವ್ಯವಸ್ಥೆ ಗಮನಿಸಿದರು. ಹಠಾತ ಶಾಸಕರ ಭೇಟಿಯಿಂದಾಗಿ ಕಕ್ಕಾ,ಬಿಕ್ಕಿಯಾದ ವೈದ್ಯರು, ಸಿಬ್ಬಂದಿ ಏನು ಹೇಳಬೇಕೆಂಬ ಗೊಂದಲಕ್ಕೆ ಸಿಕ್ಕು ಒದ್ದಾಡಿದರು.
ಕೆಲವರು ತಮಗೆ ಬೇಕಾದ ಸಿಬ್ಬಂದಿಗಳಿಗೆ ಫೋನ್ ಮಾಡಿ ಶಾಸಕರು ಬಂದ ವಿಷಯ ತಿಳಿಸಿದರು. ತಕ್ಷಣವೇ ಎದ್ದು,ಬಿದ್ದು ಬಂದ ಕೆಲವರು ಶಾಸಕರನ್ನು ಕಂಡು ಬೆವೆತರು. ಇಲ್ಲಿಗೆ ಬರುವವರು ಬಡವರೇ, ಕಾರಣ ಅವರ ಜೀವ ಉಳಿಸುವ ಕೆಲಸ ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಶಾಸಕರು ತಾಕೀತು ಮಾಡಿದರು.























