
ಯಾದಗಿರಿ:ಫೆ.೧:ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಡೆಚೂರ-ಬಾಡಿಹಾಳ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತಾವಿತ ಎರಡನೇ ಹಂತದ ಕೈಗಾರಿಕಾ ಅಭಿವೃದ್ಧಿಯನ್ನು ತಕ್ಷಣ ಕೈಬಿಟ್ಟು, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಶಾಸಕ ಶರಣಗೌಡ ಕಂದಕೂರ ಅವರು ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೈಗಾರಿಕೆಗಳ ಸ್ಥಾಪನೆಗಾಗಿ ರೈತರಿಂದ ಸುಮಾರು ೩,೨೦೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಷಪೂರಿತ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಅವರು ಹೇಳಿದರು. ಈ ಕುರಿತು ಈ ಹಿಂದೆ ತಮ್ಮ ತಂದೆ ದಿವಂಗತ ನಾಗನಗೌಡ ಕಂದಕೂರ ಅವರು ಶಾಸಕರಾಗಿದ್ದಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಎರಡನೇ ಹಂತದ ಯೋಜನೆಯನ್ನು ಕೈಬಿಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದರು ಎಂದು ಶಾಸಕರು ವಿವರಿಸಿದರು.
ಸರ್ಕಾರ ರಚಿಸಿದ್ದ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ರೈತರ ಅಭಿಪ್ರಾಯ ಸಂಗ್ರಹಿಸಿದಾಗ ಶೇ.೯೦ರಷ್ಟು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಇದುವರೆಗೂ ಸರ್ಕಾರ ನಿರ್ಧಾರ ಜಾರಿಗೆ ತಂದಿಲ್ಲ ಎಂದು ಅವರು ಆರೋಪಿಸಿದರು. ಕೈಗಾರಿಕಾ ಪ್ರದೇಶದ ಸುತ್ತಮುತ್ತಲ ಜನರ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆ ಸ್ಥಾಪಿಸಬೇಕೆಂದು ಶಾಸಕರು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಸುರೇಶ್ ಬೈರತಿ, ಶಾಸಕರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.























