ಶಾಸಕಿ ರೂಪಕಲಾಗೆ ಮುಕ್ತ ವಿವಿ ಪಿಎಚ್ ಡಿ

ಕೋಲಾರ.ಜ.೧- ಶಾಸಕರಾಗಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಜಯ ದಾಖಲಿಸಿ, ಜನಮನ ಗೆದ್ದಿರುವ ಶಾಸಕಿ ರೂಪಕಲಾ ಶಶಿಧರ್ ಅವರು ಜನಸೇವೆಯ ನಡುವೆಯೂ ನಿರಂತರ ಅಧ್ಯಯನದೊಂದಿಗೆ ರಾಜ್ಯಶಾಸ್ತ್ರ ವಿಭಾಗದಡಿ ಮಂಡಿಸಿರುವ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.


ಶನಿವಾರ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಭವ್ಯ ಘಟಿಕೋತ್ಸವ ಸಮಾರಂಭದಲ್ಲಿ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಎಂ. ಶಶಿಧರ್ ರವರು ಪಿ.ಹೆಚ್.ಡಿ. (ಡಾಕ್ಟರೇಟ್) ಪದವಿಯನ್ನು ಸ್ವೀಕರಿಸುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.


ರೂಪಕಲಾ ಎಂ. ಶಶಿಧರ್ ರವರು ಪೊಲಿಟಿಕಲ್ ಸೈನ್ಸ್ (ರಾಜ್ಯ ಶಾಸ್ತ್ರ) ವಿಭಾಗದಡಿ ‘ಕೋಲಾರ ಜಿಲ್ಲಾ ಪಂಚಾಯತ್‌ನಲ್ಲಿ ಮಹಿಳಾ ಸದಸ್ಯರ ಪಾತ್ರ ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿಗೆ ಪಾತ್ರರಾಗಿದ್ದಾರೆ.


ಮಹಿಳಾ ಪ್ರತಿನಿಧಿಗಳ ರಾಜಕೀಯ ಪಾತ್ರ, ಆಡಳಿತದಲ್ಲಿ ಅವರ ಕೊಡುಗೆ, ಹಾಗೂ ಸ್ಥಳೀಯ ಸ್ವಶಾಸನ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮಹತ್ವವನ್ನು ಈ ಅಧ್ಯಯನದಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದ್ದು, ಅವರ ಈ ಸಾಧನೆಗೆ ಡಾಕ್ಟರೇಟ್ ಗೌರವ ಲಭಿಸಿದೆ.


ಶನಿವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ರೂಪಕಲಾ ಎಂ. ಶಶಿಧರ್ ಅವರಿಗೆ ಪಿ.ಹೆಚ್.ಡಿ. ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳು, ವಿಶ್ವವಿದ್ಯಾನಿಲಯದ ಕುಲಪತಿಗಳು, ಪ್ರಾಧ್ಯಾಪಕರು ಹಾಗೂ ಅನೇಕ ಸಂಶೋಧಕರು ಉಪಸ್ಥಿತರಿದ್ದರು.


ಸಕ್ರಿಯ ರಾಜಕೀಯ ಜೀವನದ ನಡುವೆಯೂ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ಮಹಿಳೆಯರು ಸಾರ್ವಜನಿಕ ಜೀವನದಲ್ಲಿಯೂ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಮಾನವಾಗಿ ಸಾಧನೆ ಮಾಡಬಹುದು ಎಂಬುದಕ್ಕೆ ರೂಪಕಲಾ ಶಶಿಧರ್ ಉದಾಹರಣೆಯಾಗಿದ್ದಾರೆ.


ಕೆಜಿಎಫ್ ನಗರಕ್ಕೆ ಸರ್ಕಾರದ ಯೋಜನೆಗಳನ್ನು ತರುವಲ್ಲಿ ಅವರು ಪಡುತ್ತಿರುವ ಶ್ರಮ ಈಗಾಗಲೇ ಮನೆಮಾತಾಗಿದೆ, ಕ್ಷೇತ್ರದ ಜನಾನುರಾಗಿ ಶಾಸಕರಾಗಿ ಹೆಸರು ಮಾಡಿರುವ ರೂಪಕಲಾ ಶಶಿಧರ್ ಅವರು, ಸರ್ಕಾರ ವಿವಿಧ ಗ್ಯಾರೆಂಟಿ ಭಾಗ್ಯಗಳ ನಡುವೆ ಅಭಿವೃದ್ದಿಗೆ ಅನುದಾನ ನೀಡುತ್ತಿಲ್ಲ ಎಂಬ ಅಪವಾದವನ್ನು ಮೀರಿ ಕ್ಷೇತ್ರಕ್ಕೆ ಹಣ ತಂದಿದ್ದಾರೆ, ಇಡೀ ಜಿಲ್ಲೆಯಲ್ಲೇ ಅತಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನವನ್ನು ಪಡೆದುಕೊಂಡಿದ್ದಾರೆ, ಕೆಜಿಎಫ್ ನಗರದ ಅಭಿವೃದ್ದಿಗೆ ಅವರು ನೀಡಿರುವ ಕೊಡುಗೆ ಸ್ಮರಣೀಯವಾಗಿದೆ.


ವಿರೋಧಿಗಳ ಟೀಕೆಗಳಿಗೆ ಉತ್ತರವೂ ನೀಡದೇ ತಮ್ಮ ಕಾಯಕ ಮುಂದುವರೆಸಿಕೊಂಡು ಹೋಗಿರುವ ರೂಪಕಲಾಶಶಿಧರ್, ಕೆಜಿಎಫ್ ನಗರಕ್ಕೆ ನಿರೀಕ್ಷೆಗೂ ಮೀರಿ ಅನುದಾನ ತಂದಿದ್ದಾರೆ, ಕೈಗಾರಿಕಾ ವಲಯ ಮಂಜೂರು ಮಾಡಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದಾರೆ.


ರಾಜಕಾರಣದಲ್ಲಿ ಮಹಿಳೆಯರಿಗೆ ಅಧಿಕಾರ ಸಿಕ್ಕರೆ ಅವರ ಪತಿ ಆಡಳಿತ ನಡೆಸುತ್ತಾರೆ ಎಂಬ ಅಪವಾಧ ಇರುವುದರ ನಡುವೆಯೇ ಏಕಾಂಗಿಯಾಗಿ ಓರ್ವ ಮಹಿಳೆ ಮನಸ್ಸು ಮಾಡಿದರೆ ಹೇಗೆ ಜನಪರ ಆಡಳಿತ, ಸೇವೆ ನೀಡಹುದು ಎಂಬುದನ್ನು ಸಾಕ್ಷೀಕರಿಸಿ ಜನಾನುರಾಗಿ ಶಾಸಕರಾಗಿದ್ದಾರೆ.