
ಅಥಣಿ :ಜು.4: ತಾಲೂಕಿನ ಪೂರ್ವ ಭಾಗದ ಕೊಟ್ಟಲಗಿ-ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಪೂರ್ವ ಭಾಗದ 8 ಕೆರೆಗಳಿಗೆ ನೀರು ತುಂಬುವ ಯೋಜನೆ ಪ್ರಾರಂಭವಾಗಿರುವುದರಿಂದ ಭಾಗವು ಸಂಪೂರ್ಣ ನೀರಾವರಿ ಹೊಂದಲಿದೆ. ಇದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಅಮ್ಮಾಜೇಶ್ವರಿ ಯೋಜನೆಯು ರಾಜ್ಯದಲ್ಲಿಯೇ ಮಾದರಿ ಯೋಜನೆಯಾಗಿ ಪರಿಣಮಿಸಲಿದೆ. ಇದರಿಂದ ಇಲ್ಲಿನ ರೈತರ ಬಾಳು ಬಂಗಾರವಾಗಲಿದೆ. ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಯಲ್ಲಮ್ಮವಾಡಿ ಕರೆಯ ಮೂಲಕ 8 ಕೆರೆಗಳಿಗೆ ನೀರು ತುಂಬಿಸುವ 95 ಕೋಟಿ ಅಂದಾಜು ವೆಚ್ಚದ ಎರಡನೇ ಹಂತದ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಶೇ.96 ರಷ್ಟು ನೀರಾವರಿಯಾಗಿದೆ. ಮತಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅಂದು ಕಾಂಗ್ರೆಸ್ ಪಕ್ಷದವರಿಂದ ವಾಗ್ದಾನ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೆ ಹೀಗಾಗಿ ಸಿಎಂ. ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹಕಾರದಿಂದ ತಾಲೂಕಿನಲ್ಲಿ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ, ಗುಣಮಟ್ಟದ ವಿದ್ಯುತ್, ನೀರು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸುಸಜ್ಜಿತ ರಸ್ತೆ ಬೇಕು ಈ ನಿಟ್ಟಿನಲ್ಲಿ ನಾನು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ ಎಂದ ಅವರು ಶಾಸಕನಾಗಿ ನಾನು ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಅಥಣಿ ತಾಲೂಕಿನ ಅಭಿವೃದ್ಧಿಗಾಗಿ ಕನಸು ಕಂಡಿದ್ದೆ ಆ ಕನಸು ನನಸು ಮಾಡುವ ನಿಟ್ಟಿನಲ್ಲಿಯೇ ನಾನು ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.
ಕೆರೆ ತುಂಬುವ ಯೋಜನೆ ಪೂರ್ಣಗೊಳ್ಳಲು ಸಣ್ಣ ನೀರಾವರಿ ಯೋಜನೆಯ ನಿವೃತ್ತ ಸಹಾಯಕ ಅಭಿಯಂತರ ಶ್ರೀಕಾಂತ ಮಾಕಾಣಿ ಹಾಗೂ ಸದ್ಯದ ಅಭಿಯಂತರ ಪ್ರವೀಣ ಪಾಟೀಲ ಇವರ ಪರಿಶ್ರಮವೇ ಕಾರಣ ಎಂದ ಅವರು ಗುತ್ತಿಗೆದಾರ ಸಂತೋಷ ಗಾಣಿಗೇರ ಕೂಡ ಉತ್ತಮವಾಗಿ ಕಾಮಗಾರಿ ನಿರ್ವಹಿಸಿದ್ದ ಪರಿಣಾಮ ಈ ಯೋಜನೆ ಪೂರ್ಣಗೊಂಡಿದೆ. ಈ ಎಲ್ಲಾ ಯೋಜನೆಗಳು ರೈತರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಶಕ್ತಿ ಹೊಂದಿದ್ದು, ಅಮ್ಮಾಜೇಶ್ವರಿ ಯೋಜನೆಯು ರಾಜ್ಯದಲ್ಲಿಯೇ ಮಾದರಿ ಯೋಜನೆಯಾಗಿ ಪರಿಣಮಿಸಲಿದೆ ಎಂದರು
“ವಿದ್ಯುತ್ ಕ್ಷೇತ್ರಕ್ಕೂ ಪೂರಕ ಯೋಜನೆಗಳು”
ನೀರಾವರಿ ಯೋಜನೆಗಳ ಜೊತೆಗೆ, 6 ವಿದ್ಯುತ್ ಉಪಕೇಂದ್ರಗಳು ಸ್ಥಾಪನೆಯಾಗಲಿದ್ದು, ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಖಚಿತವಾಗಲಿದೆ. ಜೊತೆಗೆ, ಅಥಣಿಯಲ್ಲಿ 200 ಮೆಗಾವ್ಯಾಟ್ ಸಾಮಥ್ರ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಗೂ ಈಗಾಗಲೇ ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭ ವಾಗಲಿದೆ ಈ ಯೋಜನೆಗಳು ಕೇವಲ ನೀರಾವರಿ ಕ್ಷೇತ್ರಕ್ಕೆ ಮಾತ್ರವಲ್ಲದೆ, ಇಡೀ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಲಿವೆ ಎಂದರು.
ಕರಿ ಮಸೂತಿ ನೀರಾವರಿ ಯೋಜನೆಯಿಂದ ಹೊರಗುಳಿದ 12 ಸಾವೀರ ಎಕರೆ ಸೇರಿದಂತೆ 75 ಸಾವೀರ ಎಕರೆ ಭೂಮಿ ಈ ಯೋಜನೆಗಳಿಂದ ನೀರಾವರಿಗೊಳಪಡಲಿದೆ. ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಬರುವುದು ಅಗತ್ಯವಿದೆ. ಆದ್ದರಿಂದ ರೈತರ ಮಕ್ಕಳಿಗೆ ಉತ್ತಮ ಶಿಕ್ಷಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೊಕಟನೂರ ಗ್ರಾಮದಲ್ಲಿ ಈಗಾಗಲೇ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಅದರಂತೆ ರೈತರ ಮಕ್ಕಳು ಸುಧಾರಿತ ಕೃಷಿ ಪದ್ಧತಿ ಮೂಲಕ ವ್ಯವಸಾಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಿನ ವರ್ಷ ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಲಕ್ಷ್ಮಣ ಸವದಿ ಮುಖ್ಯಮಂತ್ರಿಯಾಗಲಿ- ಅಭಿವೃದ್ಧಿ ಹರಿಕಾರರು, ಜನ,ಸಾಮಾನ್ಯರ, ರೈತರ ಯಶಸ್ವಿ ಮತ್ತು ಪ್ರಭಾವಿ ನಾಯಕ, ಶಾಸಕರಾದ ಲಕ್ಷ್ಮಣ ಸವದಿಯವರು ರಾಜ್ಯದ ಮುಖ್ಯಮಂತ್ರಿಯಾಗೇ ಆಗುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು ಒಂದು ಕಾಲದಲ್ಲಿ ಬರಗಾಲ ಪೀಡಿತ ಅಥಣಿ ಮತಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಶ್ರೀಮಂತಗೊಳಿಸಿದ್ದಾರೆ ಎಂದು ಬಸವರಾಜ ಸಿಂದೂರ ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸಿದರಾಯ ಯಲ್ಲಡಗಿ, ಶೇಖರ ನೇಮಗೌಡ, ಚಿಕ್ಕ ನೀರಾವರಿ ಇಲಾಖೆಯ ಗುರುಬಸವರಾಜ, ಮಾತನಾಡಿದರು.
ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ದ ಕೊಬ್ರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ವೇಳೆ ಕೊಕಟನೂರ ಗ್ರಾಪಂ ಅಧ್ಯಕ್ಷೆ ಶಾಲವ್ವ ಪೂಜಾರಿ. ಅಥಣಿ ಪುರಸಭಾ ಸದಸ್ಯರಾದ ಕಲ್ಲೇಶ್ ಮಡ್ಡಿ. ಸಂತೋಷ ಸಾವಡಕರ. ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಮುಖಂಡರಾದ ಶಿವಾನಂದ ದಿವಾನಮಳ, ರಾಮನಗೌಡ ಧರಿಗೌಡ, ಗುರು ದಾಸ್ಯಾಳ, ಶೇಖರ ನೇಮಗೌಡ. ನೂರಅಹಮದ ಡೊಂಗರಗಾಂವ. ಅಮೋಘಸಿದ್ದ ಕೊಬ್ರಿ, ಅರ್ಜುನ್ ಪೂಜಾರಿ, ಶಾಂತಿನಾಥ ನಂದೀಶ್ವರ, ಮಹಾದೇವ ಬಿಳಿಕುರಿ, ರಸೂಲಸಾಬ ನದಾಫ್, ರಾಮನ ಗೌಡ ಪಾಟೀಲ, ಆಸೀಫ್ ತಾಂಬೋಳಿ. ಮಹಾಂತೇಶ ಠಕ್ಕಣ್ಣವರ. ಮಹಾಂತೇಶ ಬಾಡಗಿ, ,ಗುತ್ತಿಗೆದಾರ ಸಂತೋಷ ಗಾಣಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು ಸೇರಿದಂತೆ ಅನೇಕ ರೈತರು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
#
ವಿರೋಧ ಪಕ್ಷದ ಕೆಲ ನಾಯಕರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವಿಫಲವಾಗಿದೆ ಎಂದು ಹೇಳಿಕೆ ಕೊಡುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ವಿಫಲಯೋ ಅಥವಾ ಸಫಲವಾಗುತ್ತದೆಯೋ ಎನ್ನುವದರ ಕುರಿತು ಚರ್ಚೆಯಾಗಬೇಕು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಪಂಚ ಗ್ಯಾರಂಟಿ ಅನುಷ್ಠಾನದಿಂದ ಆರ್ಥಿಕ ಅಡತಡೆ ಆಗಬಾರದು ಎನ್ನುವ ಕಾರಣದಿಂದ ನಾಬಾರ್ಡ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಇದರಿಂದ ಕಾಮಗಾರಿ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ತೊಂದರೆ ಉಂಟಾಗುವುದಿಲ್ಲ.
#
ಅಥಣಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಶೇ.70 ರಷ್ಟು ಮುಗಿದಿದ್ದು, ಜನೇವರಿ ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಅಮ್ಮಾಜೇಶ್ಚರಿ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಥಣಿಗೆ ಆಗಮಿಸಿ ಈ ಎರಡೂ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಈ ಸಂದರ್ಭದಲ್ಲಿಯೇ ಕೃಷಿ ಮಹಾವಿದ್ಯಾಲಯದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಲಕ್ಷ್ಮಣ ಸವದಿ. ಶಾಸಕರು