ಉ.ಕ.ಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಲು ಶಾಸಕ ಕಂದಕೂರ ಆಗ್ರಹ

ಯಾದಗಿರಿ:ಡಿ.19: ನಮ್ಮ ಭಾಗದಲ್ಲಿ ಆಸ್ಪತ್ರೆಗಳಿವೆ. ವೈದ್ಯರಿಲ್ಲ, ಶಾಲೆಗಳಲ್ಲಿ ಶಿಕ್ಷಕರಿಲ್ಲ. ಸರ್ಕಾರ ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಸುವ ಚಳಿಗಾಲದ ಅಧಿವೇಶನದಲ್ಲಿ ಕೇವಲ ಚರ್ಚೆ ನಡೆಯುತ್ತವೆ ಹೊರತು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಮೇಲಿನ ಚರ್ಚೆ ಮೇಲೆ ಮಾತನಾಡಿದ ಶಾಸಕರು, ಈ ಭಾಗದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ, ಉಕ ಭಾಗಕ್ಕಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿ. ನಮಗೆ ಒಂದು ರೂ.ಅನುದಾನ ಕೊಡಬೇಡಿ ಆದರೆ ಬಜೆಟ್ ಮೂಲಕ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಹಾಗೂ ನೀರಾವರಿಗೆ ಆದ್ಯತೆ ಕೊಡಿ ಎಂಬ ಬೇಡಿಕೆ ಇಟ್ಟರು.
ಚರ್ಚೆ ಆರಂಭದಿಂದಲೂ ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕ ಕಂದಕೂರ, ಮುಖ್ಯಮಂತ್ರಿಗಳೇ ದಯವಿಟ್ಟು ನಮ್ಮ ಜನರ ಸಮಸ್ಯೆ ಆಲಿಸಿ, ಇಲ್ಲದಿದ್ದರೆ ಇಲ್ಲಿ ನಡೆಯುವ ಎಲ್ಲ ಚರ್ಚೆಗಳು ವ್ಯರ್ಥವಾಗುತ್ತವೆ ಎಂದರು.
ಬೃಹತ್ ಕೈಗಾರಿಕಾ ಸಚಿವರು ನಮ್ಮ ಭಾಗದವರೇ ಆಗಿದ್ದರು ಗುರಮಠಕಲ್ ಕ್ಷೇತ್ರದ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಾರ್ಖಾನೆಗಳು ಸ್ಥಾಪಿಸುವ ಮನಸ್ಸು ಮಾಡುತ್ತಿಲ್ಲ. ಸಚಿವರು ನಮ್ಮ ಜಿಲ್ಲೆಗೆ ಇದುವರೆಗೂ ಭೇಟಿ ನೀಡಿಲ್ಲ. ಹಳ್ಳಿಯಿಂದ, ದೆಹಲಿಯ ತನಕ ಮುಟ್ಟಿದ ನಾಯಕರು ಇನ್ನೂ ಭಾಷಣದಲ್ಲೇ ಉಳಿದಿದ್ದಾರೆ ಎಂದು ಸೂಕ್ಷ್ಮವಾಗಿ ತಿವಿದರು.
ವಿಶೇಷವಾಗಿ ಗುರಮಠಕಲ್ ಕ್ಷೇತ್ರದಲ್ಲಿ ಆರ್ ಓ ಪ್ಲಾಂಟ್ ಗಳ ದುರಸ್ಥಿಗಾಗಿಯೇ 4 ಕೋಟಿ ರೂ.ಅನುದಾನ ಬೇಕಿದೆ. ಇದುವರೆಗೂ ಸರ್ಕಾರ ಒಂದು ಬೋರವೆಲ್ ಕೊರೆಸಲು ನನಗೆ ಅನುದಾನ ನೀಡಿಲ್ಲ. ಹಿಂದೆ ಬೋರವೆಲ್ ಕೊರೆಸಿದ 90 ಲಕ್ಷ ರೂ.ಹಣವನ್ನು ಸರ್ಕಾರ ನೀಡಿಲ್ಲ. ಹಣ ಬಿಡುಗಡೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಸಾಕಾಗಿದೆ ಎಂದರು.
ಸಿಎಂ ಭರವಸೆಗಳು ಒಂದೂ ಈಡೇರಿಲ್ಲ
2023ರ ಈ ಸದನದಲ್ಲಿ ಮುಖ್ಯಮಂತ್ರಿಗಳು ನೀಡಿದ ಒಂದೂ ಭರವಸೆಗಳು ಈಡೇರಿಲ್ಲ. ಈ ಭಾಗದ ಪ್ರಾದೇಶಿಕ ಅಸಮತೋಲನೆ ನಿರ್ವಹಣೆಗೆ ಡಾ.ನಂಜುಡಪ್ಪ ವರದಿ ಅನುಷ್ಠಾನ ಹಳ್ಳ ಹಿಡಿದಿದೆ. ಬೆಳಗಾವಿಯಲ್ಲಿ 500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆಯಾಗಿಲ್ಲ. ರಾಯಚೂರಿನಲ್ಲಿ ಹತ್ತಿ ಬೆಳೆ ಆಧಾರಿತ ಕೈಗಾರಿಕೆಗೆ ಒತ್ತು ನೀಡುವು ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಒತ್ತು ಕೊಡುವುದಾಗಿ ಹೇಳಿದ್ದರು ಅದೂ ಆಗಲಿಲ್ಲ. ಇನ್ನೂ ಉಕ ಭಾಗದ ಮೂಲಸೌಕರ್ಯಕ್ಕೆ 4 ಸಾವಿರ ಕೋಟಿ ಮತ್ತು ರಸ್ತೆಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದರು. ಒಂದು ನಯಾಪೈಸೆ ಕೊಟ್ಡಿಲ್ಲ.ಇವೆಲ್ಲವಕ್ಕೂ ಸಿಎಂ ಉತ್ತರ ಕೊಡಬೇಕು ಎಂದು ಶಾಸಕ ಕಂದಕೂರ ಆಗ್ರಹಿಸಿದರು.
ಕನಸಿನ ಮಾತಾದ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ 2.20 ಲಕ್ಷ ಹುದ್ದೆಗಳು ಖಾಲಿ ಇದ್ದು ಸರ್ಕಾರ ಕೇವಲ 24 ಸಾವಿರ ಹುದ್ದೆ ಭರ್ತಿಗೆ ಮುಂದಾಗಿದೆ. ನಮ್ಮ ಭಾಗದ ಯುವಕರು ದೂರದ ಧಾರವಾಡ, ಹುಬ್ಬಳ್ಳಿ ನಗರಗಳಿಗೆ ಕೋಂಚಿಂಗ್ ಸಾವಿರಾರು ರೂ.ಹಣ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ನೌಕರಿ ಸಿಗುತ್ತಿಲ್ಲ. ಬಚಾವತ್ ಆಯೋಗದ ಪ್ರಕಾರ ನಮಗೆ ಕೃಷ್ಣ ಮೇಲ್ದಂಡೆ ಯೋಜನೆಯಡಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ತುಂಗಭದ್ರಾ ಡ್ಯಾಂನ ಗೇಟ್ ಒಡೆದು ಸಾವಿರಾರು ಎಕರೆ ಬೆಳೆಹಾಳಾಗಿದೆ. ಆ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ಸದನದ ಗಮನ ಸೆಳೆದರು.

ಸಿಎಂ ಸಾಹೇಬರೆ ನಮಗೆ ಆಸ್ಪತ್ರೆ ಕೊಡಿ
ಗುರಮಠಕಲ್ ನಲ್ಲಿ ನೂರು ಹಾಸಿಗೆಯ ಆಸ್ಪತ್ರೆ ನಿರ್ಮಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ತಂದೆ ನಾಗನಗೌಡ ಕಂದಕೂರ ಅವರಿಗೆ ಭರವಸೆ ನೀಡಿದ್ದರು. ದಯವಿಟ್ಟು ಈ ಬೇಡಿಕೆ ಈಡೇರಿಸಿ.
ಶರಣಗೌಡ ಕಂದಕೂರ
ಗುರಮಠಕಲ್ ಶಾಸಕ