
ಯಾದಗಿರಿ: ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಬಡತನದ ಕಾರಣಕ್ಕೆ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಬಾರದು ಎಂದು ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.
ತಾಲೂಕಿನ ಮಲ್ಹಾರ ಹಾಗೂ ಜಿನಕೇರಾ ಗ್ರಾಮಗಳಲ್ಲಿ ಮಂಗಳವಾರ ಒಟ್ಟು ೪.೧೭ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಬಂಡವಾಳ ವೆಚ್ಚದಡಿ ೮೦ ಲಕ್ಷ ರೂ. ವೆಚ್ಚದಲ್ಲಿ ಸೇತುವೆ ದುರಸ್ತಿ ಕಾಮಗಾರಿ, ಕೆಕೆಆರ್ಡಿಬಿ ಯೋಜನೆಯಡಿ ಮಲ್ಹಾರದಿಂದ ಸಾವೂರು ಗ್ರಾಮದವರೆಗೆ ೧.೯೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಇದೇ ವೇಳೆ ಜಿನಕೇರಾ ಗ್ರಾಮದಲ್ಲಿ ಕೆಕೆಆರ್ಡಿಬಿ ಮ್ಯಾಕ್ರೋ ಯೋಜನೆಯಡಿ ೫೫ ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಆರು ನೂತನ ವರ್ಗ ಕೊಠಡಿಗಳನ್ನು ಉದ್ಘಾಟಿಸಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ರೈತರಿಗೆ ಈ ಹಿಂದೆ ಏಳು ಗಂಟೆ ವಿದ್ಯುತ್ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದೀಗ ಒಂದು ಗಂಟೆ ಕಡಿತಗೊಳಿಸಿ ಆರು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಅದೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈಗಾಗಲೇ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಾವೂರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂಬ ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಅವರು, ಕೂಡಲೇ ನೀರಿನ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಸಾವೂರು ಗ್ರಾಮಕ್ಕೆ ೫ ಲಕ್ಷ ರೂ., ಜಿನಕೇರಾ ಗ್ರಾಮಕ್ಕೆ ೫ ಲಕ್ಷ ರೂ. ಹಾಗೂ ಜಿನಕೇರಾ ತಾಂಡಾಕ್ಕೆ ೩ ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದರು.
ಜಿನಕೇರಾ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕಂದಕೂರ, ಪಾಲಕರು ಎಷ್ಟೇ ಆರ್ಥಿಕ ಸಂಕಷ್ಟದಲ್ಲಿದ್ದರೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ೧೮ ವರ್ಷ ತುಂಬುವವರೆಗೂ ಮದುವೆ ಮಾಡಬಾರದು. ಬಡತನವಿದೆ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡಿ ಅವರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬೀದಿ ದೀಪದ ಬೆಳಕಿನಲ್ಲಿ ಅಭ್ಯಾಸ ಮಾಡಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೂಡ ಬಡತನದಿಂದಲೇ ಬೆಳೆದು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರನ್ನು ಮಕ್ಕಳು ಆದರ್ಶವಾಗಿಟ್ಟುಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.
ಜಿನಕೇರಾ ಗ್ರಾಮದ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ ಎಂದು ಗ್ರಾಮಸ್ಥರು ಬಹುದಿನಗಳಿಂದ ಮನವಿ ಮಾಡಿದ್ದರು. ಈ ಗ್ರಾಮ ಹಾಗೂ ತಾಂಡಾದ ಜನರ ಋಣ ನನ್ನ ಮೇಲಿದೆ. ಗ್ರಾಮದ ಅಭಿವೃದ್ಧಿ ಕಾರ್ಯಗಳ ಮೂಲಕ ಅವರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವರ್ಷ ಭೀಕರ ಬರಗಾಲ ಎದುರಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಹಲವು ಸೌಲಭ್ಯಗಳನ್ನು ನೀಡಿದರೂ ಕಾಲಕಾಲಕ್ಕೆ ಮಳೆಯಾಗುವುದು ಮತ್ತು ಪ್ರಕೃತಿ ಸಂಪತ್ತು ಸಮೃದ್ಧವಾಗಿರುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಂಕ್ರಪ್ಪ ದೇವಲ ಹಾಗೂ ಭೀಮಪ್ಪ ನಾರಾಯಣ ಅವರ ಕುಟುಂಬಸ್ಥರಿಗೆ ಕೃಷಿ ಇಲಾಖೆಯಿಂದ ತಲಾ ೫ ಲಕ್ಷ ರೂ. ಪರಿಹಾರದ ಚೆಕ್ಗಳನ್ನು ಶಾಸಕರು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಉಪವಿಭಾಗದ ಎಇಇ ಪರಶುರಾಮ ಮುಸ್ಟುರ್ಕರ್, ಭೂಸೇನಾ ನಿಗಮದ ಎಇಇ ಬನ್ನಪ್ಪ ಕೋಮಾರ, ಬಿಇಒ ವೀರಣ್ಣ ಕನ್ನಳ್ಳಿ, ಜೆಸ್ಕಾಂ ಎಇಇ ಮಾರ್ಕಂಡಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ಕೈಲಾಸ ಅನವಾರ, ಸಿಪಿಐ ನಾನಾಗೌಡ ಪಾಟೀಲ್, ಕೃಷಿ ಇಲಾಖೆಯ ಎಡಿ ಸುರೇಶ, ಕಂದಾಯ ಅಧಿಕಾರಿ ಮಲ್ಲಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕೋಟಗೇರಾ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
‘ತಿಂಗಳಿಗೆ ೨ ಸಾವಿರ ರೂ. ಕೊಡುತ್ತೇವೆಂದು ನಂಬಿ ಮತ ಹಾಕಿದ್ದೇವೆ, ಈಗ ಸೌಲಭ್ಯಗಳೇ ಸಿಗುತ್ತಿಲ್ಲ’
ಜಿನಕೇರಾ ಗ್ರಾಮದಲ್ಲಿ ಮಹಿಳೆಯರು ಶಾಸಕ ಶರಣಗೌಡ ಕಂದಕೂರ ಅವರ ಕಾರಿನ ಮುಂದೆ ನಿಂತು ತಮ್ಮ ಅಳಲು ತೋಡಿಕೊಂಡರು. ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ೨ ಸಾವಿರ ರೂ. ನೀಡುವುದಾಗಿ ಹೇಳಿದ್ದನ್ನು ನಂಬಿ ಮತ ಹಾಕಿದ್ದೇವೆ. ಆದರೆ ಈಗ ಹಣವೂ ಸರಿಯಾಗಿ ಸಿಗುತ್ತಿಲ್ಲ. ಬರಗಾಲದಿಂದ ಕುಡಿಯಲು ನೀರಿಲ್ಲ, ವಿದ್ಯುತ್ ಇಲ್ಲ, ವೃದ್ಧಾಪ್ಯ ವೇತನವೂ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರ ಅಹವಾಲಿಗೆ ಪ್ರತಿಕ್ರಿಯಿಸಿದ ಶಾಸಕ ಕಂದಕೂರ, ರಾಜ್ಯ ಸರ್ಕಾರದ ಬಳಿ ವಿವಿಧ ಯೋಜನೆಗಳಿಗೆ ಅನುದಾನ ನೀಡಲು ಹಣದ ಕೊರತೆ ಎದುರಾಗಿದೆ. ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿದರೂ ಕುಟುಂಬದ ಪುರುಷರ ಜೇಬಿಗೆ ಹೊರೆ ಬೀಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಗೆ ಸಿಇಒ, ತಾಲೂಕು ಪಂಚಾಯಿತಿಗೆ ಇಒ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಪಿಡಿ ಹುದ್ದೆಗಳು ಖಾಲಿ ಇವೆ. ಭೀಕರ ಬರಗಾಲದಿಂದ ರೈತರು ಕಣ್ಣೀರಿಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ವ್ಯಂಗ್ಯವಾಡಿದರು.
ಉಸ್ತುವಾರಿ ಸಚಿವರು ಕಾಣದಂತೆ ಮಾಯವಾಗಿದ್ದು, ಕೇವಲ ಧ್ವಜಾರೋಹಣ ಕಾರ್ಯಕ್ರಮಗಳಿಗೆ ಮಾತ್ರ ಜಿಲ್ಲೆಗೆ ಆಗಮಿಸುತ್ತಾರೆ. ಉಳಿದ ದಿನಗಳಲ್ಲಿ ಬೆಂಗಳೂರಿನಲ್ಲೇ ಇರುತ್ತಾರೆ ಎಂದು ಹಾಡಿನ ಮೂಲಕ ಸರ್ಕಾರದ ವಿರುದ್ಧ ಟೀಕಿಸಿದರು.ವಿಜಿ ರಾಮ್ ಜೀ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸಗಳನ್ನು ತಾಂತ್ರಿಕ ಸಮಸ್ಯೆ ಹಾಗೂ ಜಾಬ್ ಕಾರ್ಡ್ಗಳು ಡಿಲೀಟ್ ಆಗಿರುವ ಕಾರಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅರ್ಹ ಜನರಿಗೆ ಕೂಲಿ ಕೆಲಸ ಒದಗಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು





















