ಜೇವರ್ಗಿ:ಅ.17: ವೈಯಕ್ತಿಕ ಅನಿಸಿಕೆಗಳು, ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು ಏನೇ ಇರಲಿ, ಅವುಗಳನ್ನು ಸೌಹಾರ್ದಯುತವಾಗಿ ಮತ್ತು ಆರೋಗ್ಯಕರ ಸಂವಾದದ ಮೂಲಕ ಮಂಡಿಸುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಸಂಸ್ಕøತಿ ಮತ್ತು ಸಂಪ್ರದಾಯದ ಮೌಲ್ಯಗಳ ಬಗ್ಗೆ ಮಾತನಾಡುವವರ ನಡೆನುಡಿಗಳಲ್ಲಿ ಇನ್ನೂ ಹೆಚ್ಚಿನ ಸೌಜನ್ಯ ಮತ್ತು ಘನತೆ ಇರಬೇಕಾಗಿತ್ತು.
ಸಾರ್ವಜನಿಕ ಜೀವನದಲ್ಲಿರುವ ಸಚಿವರಾದ ಪ್ರಿಯಾಂಕ್ ಖರ್ಗೆಯವರ ತಾಯಿ ಮತ್ತು ಕುಟುಂಬದವರನ್ನು ಉದ್ದೇಶಿಸಿ ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಮತ್ತು ಬೆದರಿಕೆ ಹಾಕುವುದು ಅತ್ಯಂತ ಖಂಡನೀಯ. ಈ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವವರು ಸಾಮಾಜಿಕ ಸಂವೇದನೆ ಮತ್ತು ವ್ಯಕ್ತಿಗೌರವದ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮತ್ತು ದಿವಂಗತ ಶ್ರೀ ಧರ್ಮ್ ಸಿಂಗ್ ಸಾಹೇಬರ ಕುಟುಂಬಗಳು ಒಂದೇ ಕುಟುಂಬ ಎನ್ನುವಂತೆ ಬದುಕುತ್ತಿದ್ದೇವೆ. ಖರ್ಗೆ ಸಾಹೇಬರ ಕುಟುಂಬವನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದಂತೆ.
ಡಾ,, ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ದ್ವೇಷಿಸುವ ಮತ್ತು ಅಂಬೇಡ್ಕರ್ ವಾದಿಗಳನ್ನು ಕೆಣಕುವ ಕೀಳು ಮನಸ್ಥಿತಿಗಳನ್ನು ಸಾರ್ವಜನಿಕರು ಈಗಾಗಲೇ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿರುವ ಇತಿಹಾಸ ಈ ರಾಜ್ಯದಲ್ಲಿ ನಿಮ್ಮ ಕಣ್ಮುಂದಿದೆ. ಬುದ್ದ, ಬಸವ, ಅಂಬೇಡ್ಕರ್ ರವರ ಪರಂಪರೆ ನಮ್ಮದು. ನಮಗೆ ಹೋರಾಟ ಹೊಸದಲ್ಲ. ಸೌಹಾರ್ದಯುತ ಮತ್ತು ಆರೋಗ್ಯಕರ ಸಂವಾದದ ಬದಲಿಗೆ ಈ ರೀತಿಯ ವೈಯಕ್ತಿಕ ನಿಂದನೆ ಅಸಬ್ಯ ಶಬ್ದಗಳ ಬಳಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಡಾ ಅಜಯಸಿಂಗ ಹೇಳಿದರು.























