Home ಜಿಲ್ಲೆ ಹಳೆಯ ವಿದ್ಯುತ್ ಕಂಬ, ತಂತಿಗಳ ಬದಲಾವಣೆಗೆ ಶಾಸಕ ಚವ್ಹಾಣ ಒತ್ತಾಯ

ಹಳೆಯ ವಿದ್ಯುತ್ ಕಂಬ, ತಂತಿಗಳ ಬದಲಾವಣೆಗೆ ಶಾಸಕ ಚವ್ಹಾಣ ಒತ್ತಾಯ

ಔರಾದ್ : ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಬದಲಿಸಿ, ಹೊಸ ಕಂಬ ಮತ್ತು ತಂತಿಗಳನ್ನು ಅಳವಡಿಸುವ ಕುರಿತು ಶಾಸಕ ಪ್ರಭು ಬಿ.ಚವ್ಹಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದಾರೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಳೆಯ ಹಾಗೂ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು ಮತ್ತು ತಂತಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಮಳೆ-ಗಾಳಿ ಸಂದರ್ಭದಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯುತ್ ಮೂಲಸೌಕರ್ಯವನ್ನು ಹಂತ ಹಂತವಾಗಿ ಬದಲಿಸಿ, ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಅಗತ್ಯವನ್ನು ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಶಾಸಕರ ಪ್ರಶ್ನೆಗೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಲಿಖಿತ ಉತ್ತರ ನೀಡಿದ್ದು, ಕ್ಷೇತ್ರದಲ್ಲಿರುವ ಹಳೆಯ ವಿದ್ಯುತ್ ಕಂಬಗಳು ಹಾಗೂ ತಂತಿಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದಾರೆ. ಸಚಿವರ ಉತ್ತರಕ್ಕೆ ತೃಪ್ತರಾಗದ ಶಾಸಕರು ಲಿಖಿತ ಮಾಹಿತಿಗೂ ವಾಸ್ತವಕ್ಕೂ ವ್ಯತ್ಯಾಸಗಳಿವೆ. ಬಹಳಷ್ಟು ಗ್ರಾಮಗಳಲ್ಲಿ ಹಳೆಯ ವಿದ್ಯುತ್ ತಂತಿಗಳು ಜೋತು ಬಿದ್ದು ತೀವ್ರ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿವೆ. ವಿದ್ಯುತ್ ಅವಘಡಗಳು ನಿರಂತರವಾಗಿ ನಡೆಯುತ್ತಿವೆ. ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತುರ್ತಾಗಿ ಹಳೆಯ ಕಂಬ ಹಾಗೂ ತಂತಿಗಳನ್ನು ಬದಲಿಸಿ, ಹೊಸ ವಿದ್ಯುತ್ ಮೂಲಸೌಕರ್ಯ ಅಳವಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಅಂಗನವಾಡಿ ಪೌಷ್ಟಿಕ ಆಹಾರದ ಗುಣಮಟ್ಟದ ಬಗ್ಗೆ ಆಕ್ರೋಶ :

ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೂರೈಸಲಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ವಿಶೇಷವಾಗಿ ಮಕ್ಕಳಿಗೆ ನೀಡಲಾಗುತ್ತಿರುವ ಬೆಲ್ಲ ಸೇರಿದಂತೆ ವಿವಿಧ ಪೌಷ್ಟಿಕ ಪದಾರ್ಥಗಳು ಸೇವಿಸಲು ಯೋಗ್ಯವಾಗಿಲ್ಲ ಎಂಬ ದೂರುಗಳ ಬಗ್ಗೆ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

ಈ ಕುರಿತು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿಗಳು ಲಿಖಿತ ಉತ್ತರ ನೀಡಿ ಆಹಾರ ಸರಬರಾಜು ಕುರಿತು ಮಾಹಿತಿ ನೀಡಿದ್ದಾರೆ. ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಅಂಗನವಾಡಿಗಳ ಮೂಲಕ ಆಹಾರ ಒದಗಿಸುತ್ತಿದೆ. ಆದರೆ, ಕಳಪೆ ಗುಣಮಟ್ಟದ ಅಥವಾ ಸೇವಿಸಲು ಯೋಗ್ಯವಲ್ಲದ ಆಹಾರ ಪೂರೈಕೆಯಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಇಂತಹ ಆಹಾರ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.