Home ಜಿಲ್ಲೆ ಭವಾನಿ ಬಿಜಲಗಾಂವ ಸಪ್ತಾಹದಲ್ಲಿ ಶಾಸಕ ಚವ್ಹಾಣ ಭಾಗಿ

ಭವಾನಿ ಬಿಜಲಗಾಂವ ಸಪ್ತಾಹದಲ್ಲಿ ಶಾಸಕ ಚವ್ಹಾಣ ಭಾಗಿ

ಕಮಲನಗರ : ತಾಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಭವಾನಿ ದೇಗುಲದಲ್ಲಿ ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಬಿ.ಚವ್ಹಾಣ ಅವರು ಶುಕ್ರವಾರ ಭಾಗವಹಿಸಿದರು.

ದೇವಿಯ ದರ್ಶನ ಪಡೆದು ರೈತರು ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕೀರ್ತನಕಾರರೊಂದಿಗೆ ಹೆಜ್ಜೆ ಹಾಕಿ ಭಕ್ತರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭವಾನಿ ಮಾತೆಯ ಪರಮ ಭಕ್ತನಾಗಿರುವ ನನಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ಅಪಾರ ಆನಂದ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಭವಾನಿ ಮಾತೆಯ ಆಶೀರ್ವಾದದಿಂದಲೇ ಜನರ ಸೇವೆ ಮಾಡಲು ಶಕ್ತಿ ಮತ್ತು ಪ್ರೇರಣೆ ದೊರೆಯುತ್ತಿದೆ. ಜನರ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ, ಕ್ಷೇತ್ರದ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ ಎಂದರು.

ಈ ಬಾರಿ ಬರಗಾಲದ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಬದುಕಿನಲ್ಲಿ ಮತ್ತೆ ಆಶಾಕಿರಣ ಮೂಡಲಿ, ಶೀಘ್ರ ಉತ್ತಮ ಮಳೆಯಾಗಿ ಒಣಗುತ್ತಿರುವ ಬೆಳೆಗಳಿಗೆ ಜೀವಕಳೆ ಬರಲಿ, ಕೆರೆ-ಕಟ್ಟೆಗಳು ತುಂಬಿ ರೈತರ ಬಾಳು ಹಸನಾಗಲಿ ಎಂದು ಭವಾನಿ ಮಾತೆಯಲ್ಲಿ ಪ್ರಾರ್ಥಿಸಿದ್ದೇನೆ. ರೈತರು ಸಂಕಷ್ಟದಿಂದ ಹೊರಬಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ದೇವಿಗೆ ಬೇಡಿಕೊಂಡಿದ್ದೇನೆ. ಶೀಘ್ರದಲ್ಲಿ ಮಳೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಬಿಜಲಗಾಂವ ಗ್ರಾಮವು ವಾರಕಾರಿ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿಕೊಂಡು ಬರುತ್ತಿರುವ ಸುಂದರ ಗ್ರಾಮವಾಗಿದೆ. ಅಖಂಡ ಹರಿನಾಮ ಸಪ್ತಾಹ ಆಯೋಜಿಸುವ ಮೂಲಕ ಭಕ್ತಿಯನ್ನು ಅನಾವರಣಗೊಳಿಸುವುದರ ಜೊತೆಗೆ ನಮ್ಮ ನಾಡಿನ ಸಂಸ್ಕøತಿ, ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಬೆಳೆಸುತ್ತವೆ ಎಂದು ಹೇಳಿದರು.

ಭವಾನಿ ಬಿಜಲಗಾಂವ ಗ್ರಾಮದ ಜನರೊಂದಿಗೆ ನಾನು ಸದಾ ಇದ್ದೇನೆ. ಗ್ರಾಮದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ಸದಾ ಋಣಿಯಾಗಿದ್ದೇನೆ. ಗ್ರಾಮದ ಅಭಿವೃದ್ಧಿ ಹಾಗೂ ಭವಾನಿ ದೇವಸ್ಥಾನದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮದ ಪ್ರಗತಿಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತೇನೆ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಸತೀಷ ಬಿರಾದಾರ, ಸಚಿನ ರಾಠೋಡ, ಶಿವಾಜಿ ಮಹಾರಾಜ, ಡಾ.ಬಾಲಾಜಿ ಡೊಂಬಾಳೆ, ಅಶೋಕರಾವ ಡೊಂಬಾಳೆ, ನಾಮದೇವ ಡೊಂಬಾಳೆ, ಮುರಳಿ ಡೊಂಬಾಳೆ, ರಾಮರಾವ ಡೊಂಬಾಳೆ, ರಾಜೇಂದ್ರ ಮಾಳಿ, ತಾನಾಜಿ ಕಾರಬಾರಿ, ವೆಂಕಟ ಗುರೂಜಿ, ಸಂಜೀವ ಸಲಗರ, ಗ್ಯಾನೇಶ್ವರ ಡೊಂಬಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.