Home ಜಿಲ್ಲೆ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಚವ್ಹಾಣ

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಚವ್ಹಾಣ

ಔರಾದ್ : ಪಟ್ಟಣದಲ್ಲಿ ಉತ್ತಮ ವಿನ್ಯಾಸ ಹೊಂದಿರುವ ಭವ್ಯವಾದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಬಿ. ಚವ್ಹಾಣ ಅವರು ಗುರುವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಈ ವೇಳೆ ಕಾಮಗಾರಿಯ ಪ್ರಗತಿ, ಕಟ್ಟಡದ ವಿನ್ಯಾಸ, ಬಳಸಲಾಗುತ್ತಿರುವ ನಿರ್ಮಾಣ ಸಾಮಗ್ರಿಗಳ ಗುಣಮಟ್ಟ ಹಾಗೂ ಕೈಗೊಳ್ಳಲಾಗುತ್ತಿರುವ ನಿರ್ಮಾಣ ಕಾರ್ಯದ ವಿವಿಧ ಹಂತಗಳನ್ನು ವೀಕ್ಷಿಸಿದ ಅವರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಕಾಮಗಾರಿಯ ಪ್ರಸ್ತುತ ಹಂತದ ಕುರಿತು ಮಾಹಿತಿ ಪಡೆದರು.

ಔರಾದ ಪಟ್ಟಣದ ಜನತೆಗೆ ಬಹುದಿನಗಳಿಂದ ಅಗತ್ಯವಿದ್ದ ಈ ಭವನವು ಉತ್ತಮ ವಿನ್ಯಾಸ, ವಿಶಾಲ ಸ್ಥಳಾವಕಾಶ ಹಾಗೂ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಭವ್ಯ ಕಟ್ಟಡವಾಗಿ ನಿರ್ಮಾಣಗೊಳ್ಳುತ್ತಿದೆ. ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸಲು ಇದು ಪ್ರಮುಖ ಕೇಂದ್ರವಾಗಲಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ ವಿಚಾರಧಾರೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಅಂಬೇಡ್ಕರ್ ಭವನಗಳು ಮಹತ್ವದ ಪಾತ್ರ ವಹಿಸುತ್ತವೆ. ಸಮಾಜ ಬಾಂಧವರು ಒಂದೆಡೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಇಂತಹ ಭವನಗಳು ಉತ್ತಮ ವೇದಿಕೆಯಾಗುತ್ತವೆ. ಈ ಭವ್ಯ ಭವನವು ಮುಂದಿನ ಹಲವು ವರ್ಷಗಳ ಕಾಲ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಎಂದು ಹೇಳಿದರು.

ಕಟ್ಟಡದ ಅಡಿಪಾಯದಿಂದ ಹಿಡಿದು ಪ್ರತಿಯೊಂದು ಹಂತದ ನಿರ್ಮಾಣ ಕಾರ್ಯವನ್ನು ನಿಗದಿತ ತಾಂತ್ರಿಕ ಮಾನದಂಡಗಳಂತೆ ಕೈಗೊಳ್ಳಬೇಕು. ಸಿಮೆಂಟ್, ಮರಳು, ಕಬ್ಬಿಣ ಸೇರಿದಂತೆ ಬಳಸಲಾಗುವ ಪ್ರತಿಯೊಂದು ನಿರ್ಮಾಣ ಸಾಮಗ್ರಿಯ ಗುಣಮಟ್ಟವನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಕಾಮಗಾರಿಯಲ್ಲಿ ಯಾವುದೇ ರೀತಿಯ ಗುಣಮಟ್ಟದ ಲೋಪ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಿಗದಿತ ಗುಣಮಟ್ಟದಲ್ಲಿ ಕಾಮಗಾರಿ ನಡೆಯದಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಸಾರ್ವಜನಿಕರ ಹಣದಿಂದ ನಿರ್ಮಾಣವಾಗುತ್ತಿರುವ ಈ ಮಹತ್ವದ ಭವನವು ದೀರ್ಘಕಾಲ ಬಾಳಿಕೆ ಬರುವಂತೆ ಹಾಗೂ ಸಾರ್ವಜನಿಕರಿಗೆ ಗರಿಷ್ಠ ಪ್ರಯೋಜನವಾಗುವ ರೀತಿಯಲ್ಲಿ ನಿರ್ಮಾಣಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ದಯಾನಂದ ಘೂಳೆ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ಯಾದು ಮೇತ್ರೆ, ಶ್ರೀನಿವಾಸ ಖೂಬಾ, ಕೇರಬಾ ಪವಾರ್, ಸಂಜು ವಡೆಯರ್, ಗುಂಡಪ್ಪ ಮುಧಾಳೆ, ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳೆ, ಆನಂದ ದ್ಯಾಡೆ, ಸಂಗಮೇಶ ಅಲ್ಮಾಜೆ, ಅಬ್ಜಲ್ ಪಠಾಣ್, ರಾಜಪ್ಪ ಚಿದ್ರೆ, ಕಲ್ಯಾಣರಾವ ಕಾಳಗಾಪೂರೆ, ಸಂಗಮೇಶ ದೇಶಮುಖ, ರಾಮ ನರೋಟೆ, ಜಗನಾಥ ಚಿಟ್ಮೆ, ಸುನೀಲ ಸುಸಲಾದೆ, ಪ್ರಕಾಶ ಪತಗಿ, ನರಸಿಂಗ ದೇವಕತೆ, ಅಭಿಷೇಕ ವಾಗ್ಮೋಡೆ, ಶಿವಕುಮಾರ ವಡೆಯಾರ್, ಪ್ರಕಾಶ ಭಂಗಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.