Home ಜಿಲ್ಲೆ ತುಮಕೂರು ಸ್ವಯಂ ಗಣತಿ ಅಭಿಯಾನಕ್ಕೆ ಶಾಸಕ ಸಿಬಿಎಸ್ ಚಾಲನೆ

ಸ್ವಯಂ ಗಣತಿ ಅಭಿಯಾನಕ್ಕೆ ಶಾಸಕ ಸಿಬಿಎಸ್ ಚಾಲನೆ

ಚಿಕ್ಕನಾಯಕನಹಳ್ಳಿ, ಏ. ೧೧- ಸ್ವಯಂ ಗಣತಿ ಅಭಿಯಾನಕ್ಕೆ ಶಾಸಕ ಸಿ.ಬಿ. ಸುರೇಶ್‌ಬಾಬು ವೈಯುಕ್ತಿಕ ವಿವರಗಳನ್ನು ತಮ್ಮ ಮೊಬೈಲ್ ಮೂಲಕ ನಮೂದಿಸಿ ಚಾಲನೆ ನೀಡಿದರು.


ದೇಶಾದ್ಯಂತ ನಡೆದಿರುವ ಜನಗಣತಿ ಅಭಿಯಾನದ ಪ್ರಕ್ರಿಯೆಯಲ್ಲಿ ಡಿಜಿಟಲ್ ಕ್ರಾಂತಿ ಆರಂಭಿಸಿದ್ದು, ಸಾಮಾನ್ಯರೂ ಸಹ ತಮ್ಮ ಮೊಬೈಲ್ ಮೂಲಕ ಜನಗಣಿತಿಗೆ ಸಂಬಂಧಿಸಿದಂತೆ ತಮ್ಮ ವೈಯಕ್ತಿಕ ಮಾಹಿತಿಯನ್ನು ತಾವೆ ನಮೂದಿಸಿ ಸ್ವಯಂ ಜನಗಣತಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪಟ್ಟಣದ ತೀನಂಶ್ರೀ ಭವನದಲ್ಲಿ ಏರ್ಪಡಿಸಿದ್ದವಿಶೇಷ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ತಾವೇ ತಮ್ಮ ಮೊಬೈಲ್ ಮೂಲಕ ಜನಗಣತಿಗೆ ಸಂಬಂಧಿಸಿದ ತಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಸ್ವಯಂ ಜನಗಣತಿಗೆ ಚಾಲನೆ ನೀಡಿದರು.


ನಂತರ ಮಾತನಾಡಿದ ಶಾಸಕರು, ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ದೇಶದ ಭವಿಷ್ಯದ ಅಭಿವೃದ್ದಿಯ ಯೋಜನೆಗಳ ರೂಪುರೇಷೆಗೆ ಈ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ. ಏ.೧ರಿಂದ ೧೫ರವರೆಗೆ ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ತಮ್ಮ ಮೊಬೈಲ್ ಮೂಲಕ ಮಾಹಿತಿ ಭರ್ತಿಗೆ ಅವಕಾಶವಿದೆ ಎಂದರು.


ಏ.೧೫ರ ನಂತರ ಮೇ೧೫ ರವರೆಗೆ ಗಣತಿದಾರರು ಮನೆ ಮನೆಗೆ ಬಂದು ಗಣತಿ ಕಾರ್ಯ ನಡೆಸಲಿದ್ದು ಸಾರ್ವಜನಕರು ಈ ಡಿಜಿಟಲ್ ಇಂಡಿಯಾ ಯೋಜನೆಗೆ ಸಹಕರಿಸಿ ಎಂದರು.


ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಜನಗಣತಿಗೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಮಾಹಿತಿ ಭರ್ತಿ ಮಾಡಿದ ನಂತರ ಬರುವ ರೆಫೆರೆನ್ಸ್ ಸಂಖ್ಯೆಯನ್ನು ಜಾಗರೂಕತೆಯಿಂದ ಇಟ್ಟುಕೊಂಡು ಗಣತಿದಾರರು ನಿಮ್ಮ ಮನೆಗೆ ಬಂದಾಗ ಸದರಿ ನಂಬರ್‌ನ್ನು ಅವರಿಗೆ ತೋರಿಸಿದರೆ ಗಣತಿಕಾರ್ಯ ಸುಗಮವಾಗಲಿದೆ. ಯಾವುದೇ ಆತಂಕವಿಲ್ಲದೆ ನಿಮ್ಮ ಮಾಹಿತಿಯನ್ನು ಒದಗಿಸಿ ಎಂದರು.


ಈ ಸಾರಿ ಕಾಗದರಹಿತ ಗಣತಿಕಾರ್ಯ ಹಮ್ಮಿಕೊಂಡಿದ್ದು, ಮೊಬೈಲ್ ಮೂಲಕ ಸಾರ್ವಜನಿಕರು ಲಾಗಿನ್ ಆಗುವ ಮೂಲಕ ಸರಳವಾಗಿ ತಮ್ಮ ವಿವರವನ್ನು ದಾಖಲಿಸಬಹುದಾಗಿದೆ. ನಿಮ್ಮ ಮಾಹಿತಿಗಳು ಗೋಪ್ಯವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ಮಮತ ಉಪಸ್ಥಿತರಿದ್ದರು.