
ಬೆಂಗಳೂರು,ಡಿ.23- ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಕುರಿತಂತೆ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದೆ.
ಇದರಿಂದಾಗಿ ಬೈರತಿ ಬಸವರಾಜು ಅವರಿಗೆ ಬಂಧನದ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್, ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.
ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿಂದು ನಡೆಯಿತು. ಬೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ರೆ, ಸಿಐಡಿ ಪರ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು.
ಪ್ರಕರಣ ದಾಖಲಾಗಿ ಐದು ತಿಂಗಳು 10 ದಿನ ಆಗಿದೆ. 18 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಏಳರಿಂದ ಎಂಟು ಆರೋಪಿಗಳು ಕೊಲೆ ಸಂದರ್ಭದಲ್ಲಿ ಅಪರಿಚಿತರರು ಇದ್ದಾರೆ. ಆದರೆ, ಬೈರತಿ ಬಸವರಾಜ್‌ರನ್ನ ಎ-5 ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಎಫ್‌ಐಆರ್‌ನಲ್ಲಿ ಹೆಸರು ಸೇರಿಸಿದ್ದಾರೆ.
ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನಿನ್ನೆಯವರೆಗೂ ಸಿಐಡಿ ನೋಟಿಸ್ ನೀಡಿಲ್ಲ, ಸಮನ್ಸ್ ಕೊಟ್ಟಿಲ್ಲ. ಹೇಗೆ ವಿಚಾರಣೆಗೆ ಹಾಜರಾಗುವುದು? ಎಫ್‌ಐಆರ್‌ನಲ್ಲಿ ಹೆಸರು ಸೇರಿಸುವುದು ಬಿಟ್ಟು ಬೇರೆ ಏನ್ ಮಾಡಿದ್ದಾರೆ? ಐದು ತಿಂಗಳು ಸುಮ್ಮನಿದ್ದು ಈಗ ಕಸ್ಟೋಡಿಯಲ್ ಇಟ್ರಾಗೇಷನ್ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಎಫ್‌ಐಆರ್ ದಾಖಲು ಮಾಡಿದ ನಂತರ ಕೋಕಾ ಕಾಯ್ದೆ ಜಾರಿ ಮಾಡುತ್ತಾರೆ. ಬೈರತಿ ಬಸವರಾಜ್ ಯಾವುದೇ ತನಿಖೆಗೂ ಸಿದ್ಧ, ಯಾವತ್ತು ಕರೆದರೂ ತನಿಖೆಗೆ ಬರುತ್ತಾರೆ ಎಂದು ವಕೀಲರು ವಾದ ಮಂಡಿಸಿದರು.



























