
ಆಳಂದ:ಡಿ.22: ಕೃಷಿ ಕ್ಷೇತ್ರದ ಯಾಂತ್ರೀಕರಣದಿಂದ ರೈತರ ಆದಾಯ ಹೆಚ್ಚಿಸಿ, ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಕೃಷಿ ಇಲಾಖೆ ಜಾರಿಗೊಳಿಸಿರುವ ಪ್ರಸಕ್ತ ಸಾಲಿನ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ ರೈತರಿಗೆ ಮಹತ್ವದ ವರದಾನವಾಗಿದೆ ಎಂದು ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಹಾಗೂ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಕೃಷಿ ಇಲಾಖೆಯ ತಮ್ಮ ಸಂಪರ್ಕ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಂಬೈಂಡ್ ಹಾರ್ವೆಸ್ಟರ್ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು 20 ಲಕ್ಷ ರೂಪಾಯಿ ಸಹಾಯಧನದ ಅಡಿಯಲ್ಲಿ ಕಂಬೈಂಡ್ ಹಾರ್ವೆಸ್ಟರ್ ಚಾಲಿತ ಯಂತ್ರವನ್ನು ಇಬ್ಬರು ರೈತರಿಗೆ ವಿತರಿಸಿ ಮಾತನಾಡಿದರು.
ಯಂತ್ರಗಳನ್ನು ಪಡೆದ ರೈತರು ತಮ್ಮ ಬಳಕೆಯ ಜೊತೆಗೆ ಸುತ್ತಮುತ್ತಲಿನ ರೈತರಿಗೆ ಕಡಿಮೆ ಬಾಡಿಗೆಯಲ್ಲಿ ಸೇವೆ ಒದಗಿಸುವ ಮೂಲಕ ಗ್ರಾಮೀಣ ಕೃಷಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು. ಯಾಂತ್ರೀಕರಣದಿಂದ ಸಮಯ ಉಳಿಯುವುದರ ಜೊತೆಗೆ ಕಾರ್ಮಿಕ ಸಮಸ್ಯೆಗೆ ಪರಿಹಾರ ಸಿಗಲಿದೆ ಸರ್ಕಾರಿ ಸೌಲರ್ಭಯಗಳ ಲಾಭವನ್ನು ಕಟ್ಟಕಡೆಯ ರೈತನಿಗೆ ತಲುಪುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ ಯೋಜನೆಯ ವಿವರ ನೀಡಿ, ಜಿಲ್ಲೆಗೆ ಒಟ್ಟು ಮೂರು ಕಂಬೈನರ್ ಹಾರ್ವೆಸ್ಟರ್ ಯಂತ್ರಗಳು ಬಿಡುಗಡೆಯಾಗಿದ್ದು, ಅದರಲ್ಲಿ ಎರಡು ಯಂತ್ರಗಳನ್ನು ಆಳಂದ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಪ್ರತಿ ಯಂತ್ರದ ಒಟ್ಟು ಮೊತ್ತ 48 ಲಕ್ಷ ರೂಪಾಯಿ ಆಗಿದ್ದು, ಇದರಲ್ಲಿ 20 ಲಕ್ಷ ರೂಪಾಯಿ ಕೃಷಿ ಇಲಾಖೆಯ ಸಹಾಯಧನವಾಗಿದ್ದು, ಉಳಿದ 28 ಲಕ್ಷ ರೂಪಾಯಿಯನ್ನು ಯಂತ್ರ ಪಡೆದ ರೈತರು ವಂತಿಗೆ ರೂಪದಲ್ಲಿ ಭರಿಸಿದ್ದಾರೆ. ಈ ಯಂತ್ರವು ವಿವಿಧ ಬೆಳೆಗಳ ಕಟಾವು ಹಾಗೂ ರಾಶಿ ಮಾಡುವ ಸಾಮಥ್ರ್ಯ ಹೊಂದಿದ್ದು, ರೈತರಿಗೆ ಬಹುಪಯೋಗಿಯಾಗಲಿದೆ ಎಂದು ತಿಳಿಸಿದರು.
ಫಲಾನುಭವಿ ಜಮಗೆ ಕೆ. ಗ್ರಾಮದ ಅಮೋಲ ಥಾವರು ರಾಠೋಡ ಮತ್ತು ಅಲ್ಲಾಪೂರದ ಉಮೇಶ ವಿಠ್ಠಲ ಬಿರಾದಾರ ಅವರನ್ನು ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಡಗಾ ಗ್ರಾಪಂ ಮಾಜಿ ಅಧ್ಯಕ್ಷ ಸೂರ್ಯಕಾಂತ ಧಾಬಾ, ಬಸವಲಿಂಗಪ್ಪ ಗಾಯಕವಾಡ, ಶರಣಗೌಢ ಪಾಟೀಲ ಮೋಘಾ, ಆಳಂದ ರೈತ ಸಂಪರ್ಕ ಕೃಷಿ ಅಧಿಕಾರಿ ಸರೋಜನಿ ಕುಳಮುಟಗಿ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿಗಳು ಮತ್ತು ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

























