
ಆಂಥ್ರೋಪಿಕ್ ವರದಿ ಬಹಿರಂಗ
ನವದೆಹಲಿ, ಸೆ.೧೧- ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ದಿನದಿಂದ ದಿನಕ್ಕೆ ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಅದರ ದುರ್ಬಳಕೆಯ ಅಪಾಯವೂ ಗಂಭೀರವಾಗುತ್ತಿದೆ. ಎಐ ಸಂಸ್ಥೆ ಆಂಥ್ರೋಪಿಕ್ ಬಿಡುಗಡೆ ಮಾಡಿರುವ ಹೊಸ ಸುರಕ್ಷತಾ ವರದಿಯಲ್ಲಿ ತನ್ನ ‘ಕ್ಲಾಡ್’ ಎಐ ಮಾದರಿಯನ್ನು ವಿವಿಧ ದೇಶಗಳು ಹಾಗೂ ಸಂಘಟನೆಗಳಿಗೆ ಸಂಬಂಧಿಸಿದವರು ಜೈವಿಕ ಶಸ್ತ್ರಾಸ್ತ್ರಗಳ ಸಂಶೋಧನೆ, ಸಾಮೂಹಿಕ ಕಣ್ಗಾವಲು, ಬೇಹುಗಾರಿಕೆ, ಸೈಬರ್ ದಾಳಿ, ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ಸುಳ್ಳು ಪ್ರಚಾರಕ್ಕಾಗಿ ಬಳಸಲು ಯತ್ನಿಸಿರುವ ಹಲವು ಪ್ರಕರಣಗಳನ್ನು ಬಹಿರಂಗಪಡಿಸಿದೆ.
೨೦೨೫ರ ಡಿಸೆಂಬರ್ನಿಂದ ೨೦೨೬ರ ಆಗಸ್ಟ್ವರೆಗೆ ಪತ್ತೆಯಾದ ಹಾಗೂ ತಡೆಯಲಾದ ಹಲವು ದುರ್ಬಳಕೆ ಪ್ರಕರಣಗಳನ್ನು ವರದಿ ವಿವರಿಸಿದೆ. ರಾಜ್ಯ ಬೆಂಬಲಿತ ಗುಂಪುಗಳು, ಆರ್ಥಿಕ ಲಾಭಕ್ಕಾಗಿ ಸೈಬರ್ ಅಪರಾಧ ನಡೆಸುವವರು, ಪ್ರಚಾರ ಜಾಲಗಳು, ಸ್ಪೈವೇರ್ ಮಾರಾಟಗಾರರು ಹಾಗೂ ರಾಜಕೀಯ ಉದ್ದೇಶ ಹೊಂದಿರುವ ಸಂಘಟನೆಗಳು ಈ ದುರ್ಬಳಕೆಯ ಪ್ರಯತ್ನಗಳಲ್ಲಿ ಭಾಗಿಯಾಗಿದ್ದವು ಎಂದು ಆಂಥ್ರೋಪಿಕ್ ತಿಳಿಸಿದೆ.
ಕ್ಲಾಡ್ ಹೈಕು, ಸೊನೆಟ್ ಮತ್ತು ಓಪಸ್ ಮಾದರಿಗಳನ್ನು ಈ ಪ್ರಕರಣಗಳಲ್ಲಿ ಬಳಸಲಾಗಿತ್ತು. ಇವು ಸಾಮಾನ್ಯ ರೀತಿಯ ದುರ್ಬಳಕೆ ಪ್ರಕರಣಗಳಲ್ಲ; ಇದುವರೆಗೆ ಪತ್ತೆಯಾದ ಅತ್ಯಂತ ಗಮನಾರ್ಹ ಮತ್ತು ಹೊಸ ಸ್ವರೂಪದ ಬೆದರಿಕೆ ಚಟುವಟಿಕೆಗಳಾಗಿವೆ ಎಂದು ಸಂಸ್ಥೆ ಹೇಳಿದೆ.
ಆಂಥ್ರೋಪಿಕ್ ವರದಿಯಲ್ಲಿನ ಅತ್ಯಂತ ಸೂಕ್ಷ್ಮ ಪ್ರಕರಣಗಳು ಜೈವಿಕ ಸಂಶೋಧನೆಗೆ ಸಂಬಂಧಿಸಿವೆ. ಕೆಲವು ವಿಜ್ಞಾನಿಗಳು ಕ್ಲಾಡ್ನ ನೆರವಿನಿಂದ ಅಪಾಯಕಾರಿ ವೈರಸ್ಗಳ ಕುರಿತು ಸಂಶೋಧನೆ ನಡೆಸಲು ಪ್ರಯತ್ನಿಸಿರುವುದು ಪತ್ತೆಯಾಗಿದೆ.ಮೇ ತಿಂಗಳಲ್ಲಿ ವಿಜ್ಞಾನಿಯೊಬ್ಬರು ಚಿಕನ್ಗುನ್ಯಾ ವೈರಸ್ ಕುರಿತು ‘ಗೇನ್ ಆಫ್ ಫಂಕ್ಷನ್’ ಸಂಶೋಧನೆಗೆ ಅನುದಾನ ಅರ್ಜಿ ಸಿದ್ಧಪಡಿಸಲು ಕ್ಲಾಡ್ನ ನೆರವು ಕೋರಿದ್ದರು. ಜೀವಂತ ಪ್ರಾಣಿಗಳಲ್ಲಿ ವೈರಸ್ನ್ನು ಪುನರಾವರ್ತಿತವಾಗಿ ಸೋಂಕು ಮಾಡಿಸಿ, ಅದರ ಅಪಾಯಕಾರಿ ಗುಣಗಳನ್ನು ಹೆಚ್ಚಿಸುವಂತಹ ರೂಪಾಂತರಗಳನ್ನು ಒಳಗೊಂಡಿತ್ತು ಎಂದು ಆಂಥ್ರೋಪಿಕ್ ತಿಳಿಸಿದೆ. ಈ ಸಂಶೋಧನೆ ಸೇನಾ ಸಂಶೋಧನಾ ಸಂಸ್ಥೆಯೊಂದಕ್ಕೆ ಸಂಬಂಧಿಸಿರಬಹುದು ಎಂಬ ಅನುಮಾನವೂ ಸಂಸ್ಥೆಗೆ ಮೂಡಿತ್ತು.
ಕ್ಲಾಡ್ನ ಜೈವಿಕ ಸುರಕ್ಷತಾ ವ್ಯವಸ್ಥೆ ಈ ಮನವಿಯನ್ನು ತಡೆದರೂ, ಬಳಕೆದಾರರು ಮತ್ತೊಂದು ಮೂರನೇ ವ್ಯಕ್ತಿಯ ಎಐ ಸೇವೆಯ ಮೂಲಕ ನಿಯಂತ್ರಣವನ್ನು ತಪ್ಪಿಸಲು ಪ್ರಯತ್ನಿಸಿದ್ದರು ಎಂದು ವರದಿ ಹೇಳಿದೆ.
ಮತ್ತೊಂದು ಪ್ರಕರಣದಲ್ಲಿ ಆರ್ಥೋಪಾಕ್ಸ್ ವೈರಸ್ ಕುಟುಂಬದ ವೈರಸ್ಗಳ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಅನುದಾನ ಅರ್ಜಿಯನ್ನು ಕ್ಲಾಡ್ ಓಪಸ್ ಮೂಲಕ ಸುಮಾರು ಒಂದು ಗಂಟೆಯಲ್ಲಿ ಸಿದ್ಧಪಡಿಸಲಾಗಿತ್ತು. ಇದೇ ವೇಳೆ ಹಕ್ಕಿಜ್ವರ ವೈರಸ್ನ್ನು ಸಸ್ತನಿಗಳಿಗೆ ಹೊಂದಿಕೊಳ್ಳುವಂತೆ ಮಾಡುವ ಸಂಶೋಧನೆ ನಡೆಸುತ್ತಿದ್ದ ಮತ್ತೊಬ್ಬ ಸಂಶೋಧಕನಿಗೆ ಆಂಥ್ರೋಪಿಕ್ನ ದುರ್ಬಲ ಮಾದರಿಯ ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು.
ಇದಲ್ಲದೆ ವಿಷ ಅಥವಾ ಟಾಕ್ಸಿನ್ಗಳ ವಿನ್ಯಾಸವನ್ನು ಬದಲಿಸುವ ಎರಡು ರಾಜ್ಯ ಬೆಂಬಲಿತ ಯೋಜನೆಗಳನ್ನೂ ತಡೆದಿರುವುದಾಗಿ ಸಂಸ್ಥೆ ತಿಳಿಸಿದೆ. ೩೦ ದಿನಗಳ ಪರಿಶೀಲನೆಯಲ್ಲಿ ರಾಜ್ಯ ಸಂಬಂಧಿತ ಸುಮಾರು ೩೫ ಜೈವಿಕ ಸಂಶೋಧನಾ ಪ್ರಯತ್ನಗಳು ಪತ್ತೆಯಾಗಿದ್ದು, ಬಹುತೇಕವು ನಾಗರಿಕ ಸಂಶೋಧನೆಗಳಾಗಿದ್ದರೂ ಕೆಲವು ‘ಡ್ಯುಯಲ್ ಯೂಸ್’ ಸ್ವರೂಪದ್ದಾಗಿದ್ದವು.
ಕ್ಷಿಪಣಿ, ಡ್ರೋನ್ಗಳ ಅಭಿವೃದ್ಧಿಗೂ ಕ್ಲಾಡ್ ಬಳಕೆ
ಜೈವಿಕ ಶಸ್ತ್ರಾಸ್ತ್ರಗಳಷ್ಟೇ ಅಲ್ಲದೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೂ ಕ್ಲಾಡ್ ಬಳಕೆಯಾಗಿದೆ ಎಂದು ವರದಿ ತಿಳಿಸಿದೆ.ಚೀನಾದಲ್ಲಿ ಮೂರು, ರಷ್ಯಾದಲ್ಲಿ ಎರಡು ಹಾಗೂ ಯೆಮೆನ್ನಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು ಹಲವು ಪ್ರಕರಣಗಳನ್ನು ಆಂಥ್ರೋಪಿಕ್ ಗುರುತಿಸಿದೆ.
ಯೆಮೆನ್ನಲ್ಲಿದ್ದ ಒಂದು ಗುಂಪು ಕ್ಲಾಡ್ ಕೋಡ್ ಬಳಸಿ ಮಾರ್ಗದರ್ಶನ, ನ್ಯಾವಿಗೇಷನ್ ಮತ್ತು ನಿಯಂತ್ರಣ ವ್ಯವಸ್ಥೆಗಳ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಪ್ರಯತ್ನಿಸಿತ್ತು. ಮಾರ್ಗದರ್ಶಿತ ರಾಕೆಟ್, ೨,೦೦೦ ಕಿ.ಮೀ.ಗೂ ಹೆಚ್ಚು ದೂರ ತಲುಪುವ ಉದ್ದೇಶದ ಬಹುಹಂತದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಹೈಪರ್ಸಾನಿಕ್ ಗ್ಲೈಡ್ ವಾಹನದ ರೂಪಾಂತರಕ್ಕೆ ಸಂಬಂಧಿಸಿದ ಕೆಲಸವೂ ನಡೆದಿತ್ತು ಎಂದು ವರದಿ ಹೇಳಿದೆ. ಮಾರ್ಗದರ್ಶಿತ ರಾಕೆಟ್ನ ಪರೀಕ್ಷಾ ಉಡಾವಣೆ ನಡೆದಿದ್ದರೂ ಅದು ವಿಫಲವಾಗಿರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.
ರಷ್ಯಾದಲ್ಲಿ ‘ಡ್ರೋನ್ಡಾಕ್’ ಅಥವಾ ‘ಸೆರಾಫಿಮ್’ ಹೆಸರಿನ ಪ್ರಯತ್ನಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಕ್ಲಾಡ್ ಕೋಡ್ ಬಳಸಿ ಸ್ವಯಂಚಾಲಿತ ಎಫ್ಪಿವಿ ಕಾಮಿಕೇಜ್ ಡ್ರೋನ್ಗಳ ಸಮೂಹ ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದಾನೆ ಎಂದು ಆಂಥ್ರೋಪಿಕ್ ಹೇಳಿದೆ. ಮಾನವ ನಿಯಂತ್ರಣವಿಲ್ಲದೆ ಗುರಿ ಆಯ್ಕೆ ಮಾಡಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಚೀನಾದಲ್ಲಿ ಸೇನಾ-ಕೈಗಾರಿಕಾ ವಲಯಕ್ಕೆ ಸಂಬಂಧಿಸಿರಬಹುದಾದ ಖಾತೆಯೊಂದರಿಂದ ಎಲೆಕ್ಟ್ರಾನಿಕ್ ಯುದ್ಧ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿರುವ ೧೬ ಘಟಕಗಳ ಸಾಫ್ಟ್ವೇರ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿತ್ತು ಎಂದು ವರದಿ ಹೇಳಿದೆ. ನಂತರ ಈ ಸಿಮ್ಯುಲೇಷನ್ ಅನ್ನು ತೈವಾನ್ನ ೧೨ ನೈಜ ಗುರಿಗಳಿಗೆ ಸಂಬಂಧಿಸಿದಂತೆ ಬಳಸಲು ಪ್ರಯತ್ನಿಸಲಾಗಿತ್ತು.
ಸಾಮೂಹಿಕ ಕಣ್ಗಾವಲುಗೂ ಎಐ ಬಳಕೆ
ಕ್ಲಾಡ್ ದುರ್ಬಳಕೆಯ ಮತ್ತೊಂದು ಪ್ರಮುಖ ಕ್ಷೇತ್ರ ಸಾಮೂಹಿಕ ಕಣ್ಗಾವಲು. ಇಂತಹ ಒಂಬತ್ತು ಪ್ರಕರಣಗಳನ್ನು ಪತ್ತೆಹಚ್ಚಿರುವುದಾಗಿ ಆಂಥ್ರೋಪಿಕ್ ತಿಳಿಸಿದೆ.
ಚೀನಾದೊಂದಿಗೆ ಸಂಪರ್ಕ ಹೊಂದಿರಬಹುದಾದ ಗುಂಪೊಂದು ಉಯಿಘರ್ ಸಮುದಾಯದವರು ಹಾಗೂ ಸಿರಿಯನ್ ಸೇನೆಯೊಂದಿಗೆ ಸಂಪರ್ಕ ಹೊಂದಿರುವ ಪತ್ರಕರ್ತರನ್ನು ಗುರುತಿಸಲು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ನೇಮಕಾತಿ ಮಾಡಲು ಕ್ಲಾಡ್ ಬಳಸಿದೆ ಎಂದು ಸಂಸ್ಥೆ ಹೇಳಿದೆ.
ವಾಟ್ಸಾಪ್ ಮತ್ತು ಟೆಲಿಗ್ರಾಂನಿಂದ ಸಂಗ್ರಹಿಸಲಾದ ಮಾಹಿತಿಯನ್ನು ವಿಶ್ಲೇಷಿಸಿ ವ್ಯಕ್ತಿಗಳ ಪ್ರೊಫೈಲ್ ಸಿದ್ಧಪಡಿಸಲು, ನೈಜಕಾಲದ ಭಾಷಾಂತರ ಮಾಡಲು ಮತ್ತು ಮೋಸದ ತಂತ್ರಗಳನ್ನು ಪರೀಕ್ಷಿಸಲು ಎಐ ಬಳಕೆಯಾಗಿತ್ತು ಎನ್ನಲಾಗಿದೆ.
ಚೀನಾಕ್ಕೆ ಸಂಬಂಧಿಸಿದ ಮತ್ತಷ್ಟು ಕಣ್ಗಾವಲು ಚಟುವಟಿಕೆಗಳಲ್ಲಿ ಕ್ಯಾಥೋಲಿಕ್ ಕಾರ್ಡಿನಲ್ಗಳು, ತೈವಾನ್ನ ಪ್ರೆಸ್ಬಿಟೇರಿಯನ್ ಚರ್ಚ್, ಟಿಬೆಟಿಯನ್ ಬೌದ್ಧರು ಹಾಗೂ ಫಾಲುನ್ ಗಾಂಗ್ಗೆ ಸಂಬಂಧಿಸಿದವರ ಮೇಲೆ ನಿಗಾ ವಹಿಸುವ ಪ್ರಯತ್ನಗಳೂ ಪತ್ತೆಯಾಗಿವೆ.
ಇರಾನ್ನಿಂದ ಸಾವಿರಾರು ಜನರ ಮಾಹಿತಿ ಸಂಗ್ರಹ
ಇರಾನ್ಗೆ ಸಂಬಂಧಿಸಿದ ಎರಡು ಘಟಕಗಳು ೧೬ ಕ್ಲಾಡ್ ಖಾತೆಗಳನ್ನು ಬಳಸಿಕೊಂಡು ಒಂದು ವರ್ಷದಲ್ಲಿ ೬,೩೮೮ ಇರಾನಿಯನ್ನರ ಮೇಲ್ವಿಚಾರಣೆ ಅಥವಾ ಪ್ರೊಫೈಲಿಂಗ್ ನಡೆಸಿರುವುದಾಗಿ ಹೇಳಿಕೊಂಡಿದ್ದವು ಎಂದು ಆಂಥ್ರೋಪಿಕ್ ವರದಿ ಮಾಡಿದೆ.
ಇದಲ್ಲದೆ ೧,೫೫,೨೧೬ ಟ್ವೀಟ್ಗಳನ್ನು ವಿಶ್ಲೇಷಿಸಿ ೩೯ ವಿರೋಧ ಪಕ್ಷದ ಖಾತೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿತ್ತು. ದುರುದ್ದೇಶಪೂರಿತ ಫೈರ್ಫಾಕ್ಸ್ ವಿಸ್ತರಣೆಯೊಂದರ ಮೂಲಕ ವ್ಯಕ್ತಿಗಳ ಗುರುತಿನ ಮಾಹಿತಿಯನ್ನು ಸಂಗ್ರಹಿಸಿ ‘ಅರ್ಮಾನ್’ ಎಂಬ ಪ್ರಕರಣ ನಿರ್ವಹಣಾ ವ್ಯವಸ್ಥೆಗೆ ಸೇರಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.ಇರಾನ್ಗೆ ಸಂಬಂಧಿಸಿದ ಮತ್ತೊಬ್ಬ ವ್ಯಕ್ತಿ ಅಮೆರಿಕದ ನೌಕಾಪಡೆಯ ಗುರಿಗಳನ್ನು ಗುರುತಿಸಲು ಕ್ಲಾಡ್ ಬಳಸಿದ್ದಾನೆ ಎಂದು ಆಂಥ್ರೋಪಿಕ್ ಆರೋಪಿಸಿದೆ.
- ಕೃತಕ ಬುದ್ಧಿಮತ್ತೆ ಬಳಸಿ ಶಸ್ತ್ರಾಸ್ತ್ರ, ಕಣ್ಗಾವಲು,
- ಸೈಬರ್ ದಾಳಿ ಮತ್ತು ಪ್ರಚಾರ ಕಾರ್ಯಾಚರಣೆ
- ಎಐ ಸಂಸ್ಥೆ ಆಂಥ್ರೋಪಿಕ್ ವರದಿಯಲ್ಲಿ ಬಹಿರಂಗ


























