ಕೋಲಾರ,ನ,೩- ಮುಳಬಾಗಿಲು ತಾಲ್ಲೂಕಿನ ನಂಗಲಿ ದೊಡ್ಡಕೆರೆ, ಬ್ಯಾಟನೂರು ಮಾಣಿಕ್ಯ ಕೆರೆ ತುಂಬಿ ಕೋಡಿ ಸಹ ಹರಿದು ಇನ್ನೇನು ಕೋಡಿ ನಿಲ್ಲುವ ಹಂತದಲ್ಲಿದೆ ಆದರೇ ಕೆರೆಗಳು ಕೋಡಿ ಹರಿಯುತ್ತಿರುವ ಮಾಹಿತಿ ಸಣ್ಣ ನೀರಾವರಿ ಮತ್ತು ಕೆಸಿ ವ್ಯಾಲಿ ಯೋಜನೆ ಸಿಬ್ಬಂದಿಯ ಗಮನಕ್ಕಿದಿಯೇ ಎಂದು ಸಾರ್ವಜನಿಕರು ಸಂದೇಹ ವ್ಯಕ್ತಪಡಿಸಿದ್ದಾರೆ.
ಕೆರೆಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಬೇಕಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದೂವರೆಗೆ ದೊಡ್ಡ ಕೆರೆಗಳತ್ತ ತಲೆಹಾಕದಿದ್ದರೆ ಕೆರೆಗಳ ಆಗುಹೋಗುಗಳ ಬಗ್ಗೆ ಅಲ್ಲಿ ಸಾರ್ವಜನಿಕರಿಗೆ ತೊಂದರೆಗಳಾದರೆ ಯಾರು ನೋಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
“ಎಚ್ಚರಿಕೆ ಫಲಕಗಳು ಅಳವಡಿಸದೆ ಪ್ರಾಣಕ್ಕೆ ಕಂಟಕವಾಗಿರುವ ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿ” ಇತ್ತೀಚಿಗೆ ನಂಗಲಿ ದೊಡ್ಡಕೆರೆಯಲ್ಲಿ ವಿದ್ಯಾರ್ಥಿಯೊಬ್ಬ ಈಜುವ ಸಮಯದಲ್ಲಿ ಆಯತಪ್ಪಿ ಪ್ರಾಣ ಕಳೆದುಕೊಂಡಿದ್ದಾರೆ, ಕನಿಷ್ಠ ಸೌಜನ್ಯಕ್ಕಾದರೂ ಇದರ ಮಾಹಿತಿ ಪಡೆದಿದ್ದಾರೆಯೇ ಕೆರೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿರುವುದಿಲ್ಲವೇ ಎಂಬುದು ಸಾರ್ವಜನಿಕರು ಸಣ್ಣ ನೀರಾವರಿ ಇಲಾಖಾಧಿಕಾರಿಗಳ ಪ್ರಶ್ನೆಯಾಗಿದೆ.
ಸುಮಾರು ೩೯೫ ಎಕರೆಯುಳ್ಳ ನಂಗಲಿ ದೊಡ್ಡಕೆರೆಯ ಬಳಿ ಎಚ್ಚರಿಕೆ ಫಲಕಗಳು ಹಾಗೂ ದೊಡ್ಡಕೆರೆಯ ಮಾಹಿತಿ ಅಳವಡಿಸುವ ಯೋಗ್ಯತೆ ಇಲ್ಲದ್ದಂತಾಗಿದೆ.
ಕೆರೆಯ ಮಾಹಿತಿ ಮತ್ತು ಆಳದ ಮಾಹಿತಿ ಫಲಕಗಳಲ್ಲಿ ಅಳವಡಿಸಿದ್ದರೆ ಡೇಂಜರ್ ಜೋನ್ ಗುರುತಿಸಿದರೆ ಪ್ರಾಣಗಳನ್ನು ಉಳಿಸಬಹುದಿತ್ತಲ್ವೇ. ನಾಮಕಾವಾಸ್ಥೆಗೆ ಎರಡ್ಮೂರು ವರ್ಷಗಳ ಹಿಂದೆ ಕೆರೆ ಟ್ಯಾಂಕ್ ಬಂಡ್ ಮೇಲೆ ಜಂಗಲ್ ತೆರವುಗೊಳಿಸಿ ಬಿಲ್ ಮಾಡಿಕೊಂಡು ಹೋದವರು ಮತ್ತೆ ಆ ಕಟ್ಟೆಯ ಮೇಲ್ವಿಚಾರಣೆ ಮಾಡುವ ಕನಿಷ್ಟ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ.
ನಂಗಲಿ ದೊಡ್ಡಕೆರೆಯ ಕೋಡಿ ಹರಿಯುತ್ತಿದ್ದು, ಟ್ಯಾಂಕ್ ಬಂಡ್ ಹತ್ತಿರವಿರುವ ಗೋಡೆಯು ತೀರ ಶಿಥಿಲಾವಸ್ಥೆ ತಲುಪಿದ್ದರೂ ಸಹ ಅದರ ಬಗ್ಗೆ ಕಿಂಚಿತ್ತೂ ಯೋಚಿಸದ ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಕರೆ ಮಾಡಿ, ಸಂದೇಶ ಕಳುಹಿಸಿದರು ಸಾರ್ವಜನಿಕರಿಗೆ ಸ್ಪಂದಿಸದಂತಷ್ಟು ಕಾರ್ಯನಿರತರಾಗಿದ್ದಾರೆ. ಕನಿಷ್ಟ ಪಕ್ಷವಾದರೂ ಮುಳಬಾಗಿಲು ಕ್ಷೇತ್ರದ ಶಾಸಕರು ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಗಮನಹರಿಸಿ ಕಾಣೆಯಾಗಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣ ಹುಡುಕಿ ಕೋಡಿ ಹರಿಯುತ್ತಿರುವ ಕೆರೆಗಳ ಕಡೆ ಮುಖ ಮಾಡಿಸಬೇಕಿದೆ ಸಾಮಾಜಿಕ ಕಾರ್ಯಕರ್ತ ನಂಗಲಿ ಕಿಶೋರ್ ಒತ್ತಾಯಿಸಿದ್ದಾರೆ.























