ಬೆಂಗಳೂರು, ಆ.11-ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜಾ ಮಾಡಿದ್ದಾರೆ.
ಈ ಮೊದಲು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಉಲ್ಲೇಖವಾಗಿತ್ತು. ಇದರ ಬೆನ್ನಲ್ಲೇ ಸಂಪುಟದಿಂದಲೇ ವಜಾ ಮಾಡಿರುವ ಆದೇಶ ಹೊರಬಿದ್ದಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ , ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ತಕ್ಷಣದಿಂದಲೇ ವಜಾ ಮಾಡಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ರಾಜಣ್ಣ ಅವರ ರಾಜೀನಾಮೆ ಪಡೆಯದೆ ಸಂಪುಟದಿಂದಲೇ ವಜಾ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಅಪ್ತ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾ ಮಾಡಿದ್ದಾರೆ. ಈ ಸಂಬಂಧ ರಾಜಭವನದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ವಜಾಗೊಳಿಸುವ ಮುಜುಗರವನ್ನು ತಪ್ಪಿಸಲು ರಾಜಣ್ಣ ಅವರು ತಮ್ಮ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಮೂಲಕ ಸಿಎಂಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ಆದರೆ ಹೈಕಮಾಂಡ್ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪತ್ರವನ್ನು ಅಂಗೀಕರಿಸದೇ ಸಂಪುಟದಿಂದಲೇ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಸಿಎಂ ಶಿಫಾರಸಿನಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಣ್ಣ ಅವರನ್ನು ವಜಾಗೊಳಿಸುವ ಗೆಜೆಟ್ ಅಧಿಸೂಚನೆಗೆ ಸಹಿ ಹಾಕಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜೀನಾಮೆ ಪ್ರಸಂಗಗಳು ನಡೆದಿದ್ದವು. ಆದರೆ ಮಂತ್ರಿ ಸ್ಥಾನದಿಂದ ವಾಜಾ ಮಾಡಿದ ಘಟನೆಗಳು ನಡೆದಿರಲಿಲ್ಲ. ಚಳಿಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ.


























