ಬೀದರ, ಸೆ.೧೦: ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಆಲಿಸಿದರು.
ಅವರು ಇಂದು ಬೀದರ ತಾಲ್ಲೂಕಿನ ಮಾಲೇಗಾಂವ, ಕಪಲಾಪೂರ(ಜೆ), ಜಾಂಪಾಡ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಇವರು, ಭಾರೀ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳಯಲಾದ ಹೆಸರು, ಉದ್ದು ಸೋಯಾಬೀನ್, ತೋಗರೆ, ಸಂಪೂರ್ಣವಾಗಿ ನಾಶವಾಗಿವೆ ಮತ್ತು ವಿವಿಧ ಸ್ಥಳಗಳಲ್ಲಿ ಅನೇಕ ಮನೆಗಳು, ರಸ್ತೆ, ಸೇತುವೆ ಕುಸಿದಿವೆ.
ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಲು ಹಾಗೂ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಅಂತರ ಇಲಾಖಾ ಸಮೀಕ್ಷೆಯನ್ನು ಈಗಾಗಲೇ ಅಧಿಕಾರಿಗಳಿಗೆ ಕೈಗೊಂಡಿದ್ದಾರೆ ಎಂದರು. ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಪರಿಸ್ಥಿತಿ ಬಗ್ಗೆ ತಿಳಿಸಲಾಗಿದೆ ಮತ್ತು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದ್ದು, ಪ್ರತಿ ಹೆಕ್ಟೇರ್ ಗೆ ೫೦ ಸಾವಿರ ರೂಪಾಯಿ ನೀಡಬೇಕು ಎಂದು ಸಿ.ಎಂ ಬಳಿ ಮನವಿ ಮಾಡಲಾಗಿದೆ, ಅದಕ್ಕೆ ಅವರು ೨೦ ಸಾವಿರ ನೀಡುವುದಾಗಿ ಭರವಸೆ ನೀಡಿದ್ದಾರೆ ಹಾಗೂ ಮುಖ್ಯಮಂತ್ರಿಗಳು ಶಾಸಕರ ಕ್ಷೇತ್ರ ಆಭಿವೃದ್ಧಿಗಾಗಿ ೫೦ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಮಾಲೇಗಾಂವ ಸೇತುವೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಹಸಿಲ್ದಾರ್ ಗ್ರೇಡ್-೨ ಜಿಯಾವುದ್ದಿನ್, ತಾಲೂಕು ಪಂಚಾಯತ್ ಇಓ ಮಾಣಿಕರಾವ ಪಾಟೀಲ, ಕೃಷಿ ಇಲಾಖೆ ಅಧಿಕಾರಿ ಆರತಿ ಪಾಟೀಲ, ಪಿ.ಡಬ್ಲೂö??.ಡಿ. ಸಹಾಯಕ ಕಾರ್ಯಪಾಲಕ ಅಭಿಯಂತರರು ಭಗವಂತ ಸಿಂಗ್, ತೋಟಗಾರಿಕೆ, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

























