ಬಸ್ ನಿಲ್ದಾಣದಲ್ಲಿ “ಪುಸ್ತಕ ಗೂಡು”, ಹಾಳ್ಯಾ ಗ್ರಾ.ಪಂ.ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ,ಜ.23-ವಿಜಯನಗರ ಜಿಲ್ಲೆಯ ಹಾಳ್ಯಾ ಗ್ರಾಮ ಪಂಚಾಯತ್ ಗ್ರಾಮದ ಬಸ್ ತಂಗುದಾಣದಲ್ಲಿ ಚಿಕ್ಕದಾದ ಹಾಗೂ ಚೊಕ್ಕಾದದ ಲೈಬ್ರರಿ ನಿರ್ಮಾಣ ಮಾಡಿ ಜ್ಞಾನದ ಹಸಿವು ನೀಗಿಸುವ ಕಾರ್ಯಮಾಡಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ರಾಜ್ಯದಲ್ಲಿ ಓದುವ ಸಂಸ್ಕøತಿ ಹಬ್ಬುತ್ತಿದೆ. ನಿತ್ಯದ ಬದುಕಿನಲ್ಲಿ ನಮಗೆ ಸಿಗುವ ಸಣ್ಣ ಸಣ್ಣ ಬಿಡುವಿನ ಸಮಯವನ್ನೂ ಕೂಡ ಜ್ಞಾನಾರ್ಜನೆಗೆ ಸದ್ಬಳಕೆ ಮಾಡಿಕೊಳ್ಳಬೇಕು.
ಪುಸ್ತಕ ಗೂಡು ಎಂಬ ಪರಿಕಲ್ಪನೆಯು ಈ ಓದುವ ಸಂಸ್ಕೃತಿಗೆ ಮೌಲ್ಯಯುತ ಕೊಡುಗೆ ನೀಡುತ್ತಿದೆ ಎಂದು ವರ್ಣಿಸಿದ್ದಾರೆ.
ಬಸ್ ನಿಲ್ದಾಣಗಳೆಂದರೆ ಹರಟೆ ಕಟ್ಟೆ ಎಂಬ ಕಲ್ಪನೆಯನ್ನು ದೂರಾಗಿಸಿ ಅರಿವು ಹೆಚ್ಚಿಸುವ ಸ್ಥಳವನ್ನಾಗಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ವಿಜಯನಗರ ಜಿಲ್ಲೆಯ ಹಾಳ್ಯಾ ಗ್ರಾಮ ಪಂಚಾಯತಿಯ ಸೃಜನಾತ್ಮಕ ಕೆಲಸವು ಶ್ಲಾಘನೀಯ ಎಂದು ಪಂಚಾಯತಿಯನ್ನು ಅವರು ಪ್ರಶಂಸಿಸಿದ್ದಾರೆ.
ಪುಸ್ತಕಗಳು ಮುಕ್ತವಾಗಿ ಸಿಗುವ ಇಂತಹ ಪುಸ್ತಕ ಗೂಡುಗಳಲ್ಲಿನ ಪುಸ್ತಕಗಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದು, ಮರಳಿ ಇಡುವುದು ಮತ್ತು ಓದಿ ಮುಗಿಸಿದ ತಮ್ಮಲ್ಲಿನ ಪುಸ್ತಕಗಳನ್ನು ದೇಣಿಗೆಯಾಗಿ ನೀಡುವುದನ್ನು ನಾಗರಿಕರು ತಮ್ಮ ಹೊಣೆಗಾರಿಕೆ ಎಂದು ಭಾವಿಸಿ ಸಹಕರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ತಾವು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಿಂದಲೂ ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಹಾರ, ಹೂವಿನ ಬೊಕ್ಕೆ ತರುವ ಬದಲು ಪುಸ್ತಕ ತರುವಂತೆ ಮನವಿ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಲಕ್ಷಾಂತರ ಪುಸ್ತಕಗಳನ್ನು ಸಾರ್ವಜನಿಕರು ತಮ್ಮ ಭೇಟಿಯಲ್ಲಿ ಸಚಿವರಿಗೆ ನೀಡಿದ್ದಾರೆ. ಹಾಗೆ ಸಂಗ್ರಹವಾದ ಪುಸ್ತಕಗಳನ್ನು ರಾಜ್ಯದ ಅರಿವು ಕೇಂದ್ರಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ರವಾನೆ ಮಾಡಲಾಗುತ್ತಿದೆ.
ಸಚಿವರ ಕರೆಗೆ ಸ್ಪಂದಿಸಿದ ಸಾರ್ವಜನಿಕರು ಅಸಂಖ್ಯಾತ ಪುಸ್ತಕಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಇದು ನಾಗರಿಕರ ಸಂವೇದನೆ ಹಾಗೂ ಪುಸ್ತಕ ಪ್ರೀತಿ ಮತ್ತು ಓದಿನ ಬಗೆಗಿನ ಅವರ ಆಸಕ್ತಿಯನ್ನು ತೋರಿಸುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.