ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ,ಜು.೨-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ವಿಶೇಷ ಚೇತನ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಆಯ್ದ ೨೦೦ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’ ಸಹಾಯಕ ಸಾಧನವನ್ನು ವಿತರಿಸುವ ‘ತರಂಗಿಣಿ’ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಮಂಗಳವಾರ ಚಾಲನೆ ನಿಡಿದರು.
ಸ್ಟೇಟ್ ಸ್ಟ್ರೀಟ್ ಕಂಪನಿಯ ಸಿ.ಎಸ್.ಆರ್ ಅನುದಾನದೊಂದಿಗೆ ಯುನೈಟೆಡ್ ವೇ ಬೆಂಗಳೂರು (ಯುಡಬ್ಲ್ಯೂಬಿಇ) ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ. ಹೀಗಾಗಿ, ‘ಅಲೆಕ್ಸಾ’ ಸಾಧನವು ಗ್ರಾಮೀಣ ಅರಿವು ಕೇಂದ್ರಗಳಲ್ಲಿ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳ ಪಟ್ಟಿಗೆ ಒಂದು ಅತ್ಯುತ್ತಮ ಸೇರ್ಪಡೆಯಾಗಿದ್ದು, ಗ್ರಂಥಾಲಯ ಮೇಲ್ವಿಚಾರಕರು ಸಮುದಾಯದ ಎಲ್ಲಾ ವರ್ಗದ ಜನರೊಂದಿಗೆ ತೊಡಗಿಸಿಕೊಳ್ಳಲು ಸದರಿ ಸಾಧನವು ಸಹಾಯಕವಾಗಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
೨೦೦ ಗ್ರಾಮ ಪಂಚಾಯತಿಗಳ ಆಯ್ಕೆ
ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಆಯ್ದ ೨೦೦ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ “ತರಂಗಿಣಿ” ಕಾರ್ಯಕ್ರಮದಡಿ ಅಲೆಕ್ಸಾ ಸಹಾಯಕ ಸಾಧನಗಳನ್ನು ವಿತರಿಸಲಾಗುತ್ತಿದೆ ಎಂದೂ ಸಚಿವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈಗಾಗಲೇ ಅರಿವು ಕೇಂದ್ರಗಳನ್ನು ವಿಷೇಶಚೇತನ ಸ್ನೇಹಿಯಾಗಿಸಲು ‘ದರ್ಶಿನಿ’ ಕಾರ್ಯಕ್ರಮವನ್ನು ಚಾಲನೆಗೊಳಿಸಿದ್ದು ಎಂಟು ಸಹಾಯಕ ಸಾಧನಗಳನ್ನು ಅರಿವು ಕೇಂದ್ರಗಳಲ್ಲಿ ವಿತರಿಸಲಾಗಿದೆ. ‘ತರಂಗಿಣಿ’ ಹೆಮ್ಮೆಯ ಗರಿಯಾಗಿ ಅರಿವು ಕೇಂದ್ರಗಳಿಗೆ ಸೇರ್ಪಡೆಯಾಗುತ್ತಿದೆ.
ಬಳಕೆದಾರ ಸ್ನೇಹಿಯಾದ ಅಲೆಕ್ಸಾ ಸಾಧನವು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, ಹಿರಿಯ ನಾಗರಿಕರು ಸೇರಿದಂತೆ ವಿಶೇಷಚೇತನ ವ್ಯಕ್ತಿಗಳು ಬಳಸಲು ಅನುಕೂಲಕರವಾಗಿದ್ದು, ತಮ್ಮ ಧ್ವನಿಯನ್ನು ಬಳಸಿ ತಂತ್ರಜ್ಞಾನದೊAದಿಗೆ ಸಂವಾದ ನಡೆಸಬಹುದು. ಇದು ಮಾಹಿತಿಗೆ ಸುಲಭ ಪ್ರವೇಶ ಒದಗಿಸುವುದರ ಮೂಲಕ ಕಲಿಕೆಯನ್ನು ಸಧೃಢಗೊಳಿಸುತ್ತದೆ ಹಾಗೂ ಸಮಯವನ್ನು ಉಳಿಸುತ್ತದೆ, ಅಲೆಕ್ಸಾದೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ಯಾಲೆಂಡರ್‌ನಲ್ಲಿ ಮುಂಬರುವ ಕಾರ್ಯಕ್ರಮಗಳನ್ನು ಟ್ರ‍್ಯಾಕ್ ಮಾಡಬಹುದು, ಅಧ್ಯಯನ ಸಂಪನ್ಮೂಲಗಳನ್ನು ಪಡೆಯಬಹುದಲ್ಲದೆ ಮಾರ್ಗದರ್ಶನ, ಸಲಹೆಗಾರರ ಭೇಟಿಗೆ ಸಮಯ ಪಡೆಯಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಕಂಪ್ಯೂಟರ್ ತೆರೆಯದೆ ಇಷ್ಟೆಲ್ಲ ಮಾಡುವ ಅವಕಾಶವನ್ನು ಅಲೆಕ್ಸಾ ಕಲ್ಪಿಸಲಿದೆ, ಶಿಕ್ಷಕರು ಮುಂಬರುವ ಪಾಠಗಳಿಗೆ ತಯಾರಿ ನಡೆಸಲು ಸಹ ಇದು ಅನುಕೂಲಕರವಾಗಿದೆ. ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯು ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಈ ಸಾಧನವನ್ನು ಬಳಸಲು ಸೂಕ್ತ ತರಬೇತಿಯನ್ನು ಸಹಾ ನೀಡುತ್ತಿದೆ ಎಂದು ಹೇಳಿದ ಸಚಿವರು ಸಹಕಾರ ನೀಡುತ್ತಿರುವ ಯುನೈಟೆಡ್ ವೇ ಬೆಂಗಳೂರು ಮತ್ತು ಸ್ಟೇಟ್ ಸ್ಟ್ರೀಟ್ ಕಂಪನಿಯ ಈ ಸಹಕಾರಕ್ಕಾಗಿ ಅಭಿನಂದಿಸಿದರು.
ಅರಿವು ಕೇಂದ್ರಗಳಲ್ಲಿ ಅಗಾಧ ಸಾಧನೆ
ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿಗಳಿಗೆ ೨೦೧೯ರ ಮಾರ್ಚ್ ವರ್ಗಾವಣೆಗೊಂಡ ನಂತರ ಗ್ರಾಮ ಪಂಚಾಯತಿಗಳ ಮೇಲ್ವಿಚಾರಣೆಯ ಮೂಲಕ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಅಭಿವೃದ್ಧಿಯಲ್ಲಿ ಅಗಾಧವಾದ ಸಾಧನೆಯಾಗಿದೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ ಅವರು ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೇಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಾಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಒಟ್ಟು ೫೮೮೮ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ೫೭೬೭ ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊAಡರು.
ಸಂಘ ಸಂಸ್ಥೆಗಳಿAದ ಉಚಿತ ಕಾರ್ಯಕ್ರಮ
ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಸೌಕರ್ಯಗಳನ್ನು ಹೆಚ್ಚಿಸಲು ಹಲವಾರು ಸಂಘ ಸಂಸ್ಥೆಗಳು ಯಾವುದೇ ಹಣಕಾಸು ಬೇಡಿಕೆ ಇಲ್ಲದೆ ಒಡಂಬಡಿಕೆಯನ್ನು ಮಾಡಿಕೊಂಡು ಅರಿವು ಕೇಂದ್ರಗಳಲ್ಲಿ ಸಮುದಾಯದ ಎಲ್ಲಾ ವರ್ಗಗಳ ಹೆಚ್ಚಿನ ತಿಳುವಳಿಕೆ ಪಡೆಯಲು ಅನುಕೂಲವಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಎಂದು ಸಚಿವರು ವಿವರಗಳನ್ನು ನೀಡಿದರು.
ಸೆಂಟರ್ ಫಾರ್ ಬಜೆಟ್ ಆಂಡ್ ಪಾಲಿಸಿ ಸ್ಟಡೀಸ್ ಸಂಸ್ಥೆಯಿAದ ವಿಷಯಾಧಾರಿತ ಕಲಿಕೆಯ ಮಾಡ್ಯೂಲ್‌ಗಳ ಅಭಿವೃದ್ಧಿ, ಕಲಿಕೆಯ ಸಾಮಗ್ರಿ, ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡುವುದರ ಜೊತೆಗೆ ಸಾಮರ್ಥ್ಯಾಭಿವೃದ್ಧಿ ಕಲಿಕೆಯ ಮಾಡ್ಯೂಲ್‌ಗಳು ಮತ್ತು ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ಸಹಕಾರ, ಸೈನ್ಸ್ ಗ್ಯಾಲರಿ. ಬೆಂಗಳೂರು ಸಂಸ್ಥೆ ವತಿಯಿಂದ ವಿದ್ಯಾರ್ಥಿ ಕಲಿಕೆಯ ಅನುಭವಗಳ ಸಾಧನಗಳನ್ನು ಸಿದ್ಧಪಡಿಸುವಿಕೆ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ ವ್ಯವಸ್ಥೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ಮೂಲಕ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಸಮುದಾಯಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಜಾಗೃತಿ ಮತ್ತು ಆಸಕ್ತಿಯನ್ನು ಉತ್ತೇಜಿಸಲು ವಿವಿಧ ಚಟುವಟಿಕೆಗಳ ಆಯೋಜನೆ; ಕಲಿಕೆ, ಬೆಂಗಳೂರು ಹಾಗೂ ಟಾಟಾ ಸಂಸ್ಥೆಗಳ ಆಶ್ರಯದಲ್ಲಿ ಕಲಬುರಗಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳ ಆಯ್ದ ೩೦೦ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಸಮುದಾಯದ ವೃದ್ಧರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮ ವೃದ್ಧಿಸುವ ಮೂಲಕ ಅವರ ಜೀವನ ಗುಣಮಟ್ಟವನ್ನು ಸುಧಾರಣೆಗೆ ನೆರವು; ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫರ್ಮೇಶನ್ ಟೆಕ್ನಾಲಜಿ ಸಂಸ್ಥೆಯ ವತಿಯಿಂದ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಯುವಕರಿಗೆ ಸುಧಾರಿತ ತಂತ್ರಜ್ಞಾನ ಆಧಾರಿತ ವಿವಿಧ ಸಾಮರ್ಥ್ಯವೃದ್ಧಿ ತರಬೇತಿ; ಪ್ಯಾಲಿಯಂ ಇಂಡಿಯಾ, ತ್ರಿವೆಂಡ್ರಮ್ ಸಂಸ್ಥೆಯಿAದ ಆಯ್ದ ಗ್ರಾಮ ಪಂಚಾಯತಿಗಳ ಮುಂದಾಳತ್ವದಲ್ಲಿ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಯನ್ನು ನಿರ್ವಹಿಸಲು ‘ಉಪಶಾಮಕ ಆರೈಕೆ’ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ತಾಂತ್ರಿಕ ಬೆಂಬಲ; ಸ್ಟಿಚ್ಚಿಂಗ್ ಬ್ರ‍್ಯಾಕ್ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ವಿಜಯಪುರ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಪ್ರದೇಶದ ತೀವ್ರ ಬಡತನದ ಕುಟುಂಬಗಳಿಗೆ ಸಾಮಾಜಿಕ ರಕ್ಷಣೆಯ ಮತ್ತು ವಿಶೇಷವಾಗಿ ಮಹಿಳೆಯರನ್ನು ಉತ್ತೇಜಿಸಲು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸಹಯೋಗದಲ್ಲಿ ‘ನಾರಿ-ಕಿಲ್ಪ್’ ಯೋಜನೆಯ ಮೂಲಕ ಬೆಂಬಲ; ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ ಸಂಸ್ಥೆಯ ವತಿಯಿಂದ ಗ್ರಾಮ ಪಂಚಾಯತಿಗಳಿAದ ನಡೆಸಲಾಗುತ್ತಿರುವ ಕೂಸಿನ ಮನೆ ಕೇಂದ್ರಗಳ ಅಧ್ಯಯನ ಕೈಗೊಂಡು, ಕೂಸಿನ ಮನೆಗಳ ಅನುಷ್ಠಾನದಲ್ಲಿ ಕೈಗೊಳ್ಳಬೇಕಾದ ಸುಧಾರಣೆ ನಿಟ್ಟಿನಲ್ಲಿ ಸಹಕಾರ. ಹೀಗೆ ಉಚಿತವಾಗಿ ಗ್ರಾಮೀಣ ಪ್ರದೇಶದ ಕಲ್ಯಾಣಕ್ಕಾಗಿ ಅರಿವುಕೇಂದ್ರಗಳ ಮೂಲಕ ಹಾಕಿಕೊಂಡಿರುವ ಹಲವಾರು ಕಾರ್ಯಕ್ರಮಗಳಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘ ಸಂಸ್ಥೆಗಳನ್ನು ಶ್ಲಾಘಿಸಿದರು.
ನೆರವು ನೀಡಲು ಮುಂದೆ ಬಂದಿರುವ ಸಂಘ ಸಂಸ್ಥೆಗಳೊAದಿಗೆ ಮಾಡಿಕೊಳ್ಳಲಾದ ಒಡಂಬಡಿಕೆ ಪತ್ರಗಳಿಗೆ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾಜ್) ಶ್ರೀಮತಿ ಉಮಾ ಮಹಾದೇವನ್, ಪಂಚಾಯತ್ ರಾಜ್ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು, ಸ್ಟೇಟ್ ಸ್ಟ್ರೀಟ್ ಕಂಪನಿ ಹಾಗೂ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು, ಹಾಜರಿದ್ದರು