
ಬೀದರ್: ಜ.೧೨: ಹೃದಯಾಘಾತದಿಂದ ಈಚೆಗೆ ನಿಧನರಾದ ಹಿರಿಯ ಪತ್ರಕರ್ತ ನಾಗಶೆಟ್ಟಿ ಧರಂಪುರ ಅವರ ಇಲ್ಲಿಯ ಚಿದ್ರಿಯಲ್ಲಿ ಇರುವ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶನಿವಾರ ಭೇಟಿ ನೀಡಿದರು.
ಮೃತರ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದರು.
ನಾಗಶೆಟ್ಟಿ ಧರಂಪುರ ತಮಗೆ ಅತ್ಯಂತ ಆತ್ಮೀಯರಾಗಿದ್ದರು. ಸಾವಿಗೆ ೨೦ ಗಂಟೆ ಮೊದಲು ವಿವಿಧ ವಿಷಯಗಳ ಕುರಿತು ತಮ್ಮೊಂದಿಗೆ ಚರ್ಚೆ ನಡೆಸಿದ್ದರು. ಅವರ ಅಕಾಲಿಕ ಸಾವು ಆಘಾತ ಉಂಟು ಮಾಡಿದೆ ಎಂದು ಹೇಳಿದರು.
ಧರಂಪುರ ೩೫ ವರ್ಷ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸಿದ್ದರು. ಜಿಲ್ಲೆಯ ಪತ್ರಿಕಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸದಾ ಹಸನ್ಮುಖಿ ಆಗಿರುತ್ತಿದ್ದರು. ಉತ್ಸಾಹದಿಂದ ಇರುತ್ತಿದ್ದರು ಎಂದು ಸ್ಮರಿಸಿದರು.
ದೇವರು ಧರಂಪುರ ಅವರ ಆತ್ಮ ಹಾಗೂ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಹಾಗೂ ವೈಯಕ್ತಿಕವಾಗಿ ಸಾಧ್ಯವಾದ ನೆರವು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ರಾಜಶೇಖರ ಬಿರಾದಾರ ಚಿದ್ರಿ,
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಖಜಾಂಚಿ ದೇವಪ್ಪ ಚಾಂಬೋಳೆ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಹಿರಿಯ ಉಪಾಧ್ಯಕ್ಷ ಗೌತಮ ಚಿಂತಲಗೇರಾ, ಸಂಘದ ಪದಾಧಿಕಾರಿಗಳು, ಧರಂಪುರ ಕುಟುಂಬದ ಸದಸ್ಯರು, ಚಿದ್ರಿ ಗ್ರಾಮದ ಮುಖಂಡರು ಇದ್ದರು.
























