ಬೀದರ, ಸೆ.18: ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರಿಂದು ಶ್ರೀ ಕ್ಷೇತ್ರ ನರಸಿಂಹ ಝರಣಿ ದೇವಾಲಯ ಆವರಣದಲ್ಲಿ ಕಸ ತೆಗೆಯುವ ಮೂಲಕ ಸ್ವಚ್ಛತೆಯೇ ಸೇವೆ – 2025 (ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ) ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಸ್ವಚ್ಛತೆ ಕೇವಲ ಅಭಿಯಾನವಲ್ಲ, ಇದು ಪ್ರತಿಯೊಬ್ಬರ ದೈನಂದಿನ ಬದುಕಿನ ಸಂಸ್ಕಾರವಾಗಬೇಕು. ಮಹಾತ್ಮ ಗಾಂಧೀಜಿ ಕನಸಾದ ಸ್ವಚ್ಛ ಮತ್ತು ಆರೋಗ್ಯಕರ ಭಾರತ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ. ಸಾರ್ವಜನಿಕ ಸ್ಥಳಗಳ ಶೌಚತೆ ಮಾತ್ರವಲ್ಲ, ನಮ್ಮ ಮನೆ, ಬೀದಿ ಮತ್ತು ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ನಾವು ಗಾಂಧೀಜಿಯವರ ಕನಸನ್ನು ನಿಜ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್, ಬೀದರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಬೀದರ ನಗರಾಭಿವೃದ್ಧಿ ಕೋಶದ ಎಇಇ ಅರುಣಕುಮಾರ, ಎಸ್.ಎಸ್.ಜಿ. ಮಹಿಳಾ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
























