
ಚಿಕ್ಕಬಳ್ಳಾಪುರ, ನ.೪- ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ೮ ರೂ. ಹೆಚ್ಚಳ ಮಾಡಲು ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಿಮುಲ್) ನಿರ್ದೇಶಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಭೈರತಿ ಸುರೇಶ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಂ.ಎಫ್. ನಿರ್ದೇಶಕರಾದ ಭರಣಿ ವೆಂಕಟೇಶ್, ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
ಹಾಲಿನ ಖರೀದಿ ದರದಲ್ಲಿ ಮಾಡಿರುವ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಆದಾಯ ದೊರೆಯಲಿದೆ ಮತ್ತು ಹೈನುಗಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ನವೆಂಬರ್ ೧ ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರದಂತೆ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ೮ ರೂ. ಹೆಚ್ಚಳ ಮಾಡಲಾಗಿದೆ. ಈ ಪೈಕಿ ೭ ರೂ. ನೇರವಾಗಿ ಹಾಲು ಉತ್ಪಾದಕ ರೈತರಿಗೆ ದೊರೆಯಲಿದ್ದು, ಉಳಿದ ೧ ರೂ. ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ಮೀಸಲಿಡಲಾಗಿದೆ. ಇದರಿಂದ ಇದುವರೆಗೆ ಪ್ರತಿ ಲೀಟರ್ ಹಾಲಿಗೆ ೩೫ ರೂ.ಪಡೆಯುತ್ತಿದ್ದ ರೈತರಿಗೆ ೪೨ ರೂ. ದೊರೆಯಲಿದೆ, ಸರ್ಕಾರದ ೫ರೂ. ಪ್ರೋತ್ಸಾಹಧನ ಸೇರಿ ಒಟ್ಟು ೪೭ ರೂ. ಪಡೆಯಲಿದ್ದಾರೆ ಎಂದು ತಿಳಿಸಿದರು.
ಕಳೆದ ಕೆಲ ವರ್ಷಗಳಿಂದ ಪಶು ಆಹಾರ, ಮೇವು, ಔಷಧೋಪಚಾರ ಮತ್ತು ಜಾನುವಾರುಗಳ ನಿರ್ವಹಣಾ ವೆಚ್ಚ ಏರಿಕೆ ಹೊಂದಿದ್ದು, ಹೈನುಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲಿನ ಖರೀದಿ ದರ ಹೆಚ್ಚಿಸಲು ಕೈಗೊಂಡಿರುವ ನಿರ್ಧಾರವು ರೈತರಿಗೆ ಕೊಂಚ ನೆಮ್ಮದಿ ನೀಡಲಿದೆ ಎಂದರು.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಚಿಮುಲ್ ನಿರ್ದೇಶಕರು ಮತ್ತು ರೈತರು ಸಂಭ್ರಮಾಚರಣೆ ಮಾಡಿದ್ದು, ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ರೈತರಿಗೆ ನ್ಯಾಯಯುತ ಬೆಲೆ ದೊರೆಯುವುದರ ಜೊತೆಗೆ ಹಾಲು ಉತ್ಪಾದನೆ ಹೆಚ್ಚಳಕ್ಕೂ ಈ ನಿರ್ಧಾರ ಪ್ರೇರಣೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಬಾಬು, ಚಿಮುಲ್ ಎಂ.ಡಿ. ನಾಗೇಶ್, ಹಿರಿಯ ಮ್ಯಾನೇಜರ್ ರಮೇಶ್ ಬಾಬು, ಡಾ. ಮನೋರಂಜನ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಅವುಲ ರೆಡ್ಡಿ, ಮೋಹನ್ ರೆಡ್ಡಿ, ಮಿಲ್ಟನ್ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






















