ಆರ್ ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅಂಕುಶ

ಬೆಳಗಾವಿ ಸುವರ್ಣಸೌಧ ಡಿ.೧೦-ಪ್ರಾದೇಶಿಕ ಸಾರಿಗೆ ಅಧಿಕಾರಿಗಳ(ಆರ್ ಟಿಓ)ಕಚೇರಿಯ ೨೪ ಸೇವೆಗಳನ್ನು ಅನ್ ಲೈನ್ ಮಾಡಲಾಗಿದ್ದು, ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೇಲ್ಮನೆಯಲ್ಲಿ ತಿಳಿಸಿದರು.


ಸಾರ್ವಜನಿಕರಿಗೆ ತೊಂದರೆಯಾಗುವ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಿದರೆ ಆರ್ ಟಿಓ ಕಚೇರಿಗಳ ಅಧಿಕಾರಿಗಳನ್ನೇ ಹೊಣೆಯಾಗಿಸಿ ಅಮಾನತು ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಉಮಾಶ್ರೀ ಪರವಾಗಿ ಕಾಂಗ್ರೆಸ್‌ನ ಐವಾನ್ ಡಿಸೋಜ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆರ್ ಟಿಓ ಕಚೇರಿಗಳಲ್ಲಿ ಶಿಸ್ತು ತರಲು ಅನೇಕ ಕ್ರಮವಹಿಸಲಾಗಿದೆ. ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ /ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ವಹಿಗಳನ್ನು ವಿಷಯ ನಿರ್ವಾಹಕರು ನಿರ್ವಹಿಸುವುದು ಎಂದು ಹೇಳಿದರು.


ಅಧೀಕ್ಷಕರುಗಳು ಪ್ರತಿ ವಾರಕ್ಕೊಮ್ಮೆ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.
ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯ ಅವಕಾಶ ಕಲ್ಪಿಸದಂತೆ ಕರ್ತವ್ಯ ನಿರ್ವಹಿಸುವಂತೆ ಒಂದು ವೇಳೆ ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದೇವೆ ಎಂದು ಹೇಳಿದರು.


ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಛೇರಿಯ ಅಧಿಕಾರಿ/ ಸಿಬ್ಬಂದಿಯವರನ್ನು ಭೇಟಿ ಮಾಡಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್ ಟಿಓ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.


ಲೋಕಾಯುಕ್ತರವರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ವಿವರಗಳ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ.
ದಿನಾಂಕ ೦೧-೧೧-೨೦೨೧ ರಿಂದ ಸಾರಿಗೆ ಇಲಾಖೆಯಲ್ಲಿನ ೨೮ ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುತ್ತ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.


ಕಾನೂನು ಕ್ರಮ:


ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿ ಇತ್ತೀಚೆಗೆ ನಡೆದಿರುವ ಅಕ್ರಮ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ದೂರು ದಾಖಲಾದ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೇಲ್ಮನೆಗೆ ತಿಳಿಸಿದರು.


ಕಳೆದ ೨ ವರ್ಷಗಳಲ್ಲಿ ೧ ಪ್ರಕರಣ ಮಾತ್ರ ದಾಖಲಾಗಿರುತ್ತದೆ. ಅಪರ ಸಾರಿಗೆ ಆಯುಕ್ತರು (ಪ್ರವರ್ತನ) ಅಧ್ಯಕ್ಷತೆಯಲ್ಲಿ ರಚಿಸಲಾದ ಲೈಂಗಿಕ ದೂರು ನಿವಾರಣಾ ಸಮಿತಿಗೆ ಈ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದ್ದು ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ವಾರಕ್ಕೊಮ್ಮೆ ಪರಿಶೀಲನೆ:


ಕಛೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ವಹಿಗಳನ್ನು ಅಧೀಕ್ಷಕರುಗಳು ಪ್ರತಿ ವಾರಕ್ಕೊಮ್ಮೆ ಸದರಿ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸಾರಿಗೆ ಆಯುಕ್ತರ ಕಚೇರಿಯ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.