ಸಚಿವ ಸುಧಾಕರ್ ಕ್ಷಮೆಯಾಚನೆಗೆ ಮೇಟಿ ಒತ್ತಾಯ

ಕಲಬುರಗಿ,ಮೇ.24: ಚಿಕ್ಕಬಳ್ಳಾಪುರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಸಾರ್ವಜನಿಕ ಸಮಾರಂಭದಲ್ಲಿ ಒದೆಯುವುದಾಗಿ ಬೆದರಿಕೆ ಹಾಕಿರುವ ಉನ್ನತ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕೂಡಲೆ ಕ್ಷಮೆ ಯಾಚಿಸಬೇಕೆಂದು ನವ ಕರ್ನಾಟಕ ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರಿಚಕ್ರ ವಾಹನ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ವೇಳೆ ಸಚಿವರು, ವಾಹನಗಳ ಫಲಾನುಭವಿಗಳ ಆಯ್ಕೆಯಲ್ಲಿ ಲೋಪ ಉಂಟಾಗಿದೆ ಎಂಬ ಕಾರಣಕ್ಕೆ ಹೀಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸಿರುವುದು ಖಂಡನಾರ್ಹ ಎಂದಿದ್ದಾರೆ.
ಸಾರ್ವಜನಿಕ ವ್ಯವಸ್ಥೆಯಲ್ಲಿ ಕೇವಲ ಜನಪ್ರತಿನಿಧಿಗಳು ಮಾತ್ರವಲ್ಲ; ಸರ್ಕಾರಿ ಅಧಿಕಾರಿಗಳು ಸಹ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದು ಶಾಸಕಾಂಗ ಮತ್ತು ಕಾಯಾರ್ಂಗದ ಸಮನ್ವಯತೆಯನ್ನು ಎತ್ತಿ ತೋರಿಸುತ್ತದೆ. ಹೀಗಿರುವಾಗ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ಹೀಗೆ ಸಾರ್ವಜನಿಕವಾಗಿ ನಿಂದಿಸುವುದು ಅಧಿಕಾರದ ದುರ್ಬಳಕೆ ಎನಿಸಿಕೊಳ್ಳುತ್ತದೆ. ಹಾಗಾಗಿ, ಕೂಡಲೇ ಸಚಿವ ಸುಧಾಕರ್ ಅವರು ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಬೇಕೆಂದು ಮೇಟಿ ತಾಕೀತು ಮಾಡಿದ್ದಾರೆ.