
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ.೨೮: ವಚನಕಾರರು ಕೇವಲ ಸಾಹಿತ್ಯ ರಚನೆಗೆ ಸೀಮಿತರಾಗದೆ, ಸಮಾಜದಲ್ಲಿನ ಮೌಢ್ಯ, ಅಸಮಾನತೆ ಹಾಗೂ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು. ವಿಶ್ವಗುರು ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರ ಚಿಂತನೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಹಿರಿಯ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ದತ್ತಿ ನಿಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಗಟ್ಟಿಯಾದ ಇತಿಹಾಸವಿದೆ. ಕವಿಗಳು, ಸಾಹಿತಿಗಳು ಹಾಗೂ ವಚನಕಾರರು ತಮ್ಮ ಸೃಜನಶೀಲತೆ ಮತ್ತು ವೈಚಾರಿಕತೆಯ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಅವರು ವಚನ ಸಾಹಿತ್ಯದ ಮೇರುಪರ್ವತದಂತವರು. ಅವರ ಬದುಕು, ವಿಚಾರಧಾರೆ ಹಾಗೂ ಸಾಮಾಜಿಕ ಕಳಕಳಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಆಶಯಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಿದ್ಧಲಿಂಗ ಮನಹಳ್ಳಿ ಹೇಳಿದರು.
ಬಸವಣ್ಣರ ವಚನಗಳಲ್ಲಿ ಸಮಾನತೆಯ ಸಂದೇಶ
‘ಬಸವಣ್ಣನವರ ಕುರಿತು ಚಿಂತನೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಹೊನ್ನವಾಡದ ಸಾಹಿತಿ ಶರಣಮ್ಮ ಹಾದಿಮನಿ, ಬಸವಣ್ಣನವರು ವಚನಗಳ ಮೂಲಕ ಮೌಢ್ಯನಂಬಿಕೆಗಳನ್ನು ತೊಡೆದುಹಾಕಿ ಪ್ರೀತಿ, ಕರುಣೆ, ಕಾಯಕ, ದಾಸೋಹ ಹಾಗೂ ಸಮಾನತೆಯ ಆಧಾರದ ಮೇಲೆ ಆದರ್ಶ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು. ಶತಮಾನಗಳ ಹಿಂದೆ ಅವರು ಸಾರಿದ ಮಾನವೀಯ ಮೌಲ್ಯಗಳು ಆಧುನಿಕ ಸಮಾಜದಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಎಂದರು.
೨೫೦ಕ್ಕೂ ಅಧಿಕ ವಚನಗಳ ಮೂಲಕ ವೈಚಾರಿಕ ಕ್ರಾಂತಿ
‘ಹಡಪದ ಅಪ್ಪಣ್ಣನವರ ಕುರಿತು’ ವಿಶೇಷ ಉಪನ್ಯಾಸ ನೀಡಿದ ಶಿವಣಗಿಯ ಶಿಕ್ಷಕ ಸಂಗನಬಸಪ್ಪ ರಡ್ಡಿ, ಹಡಪದ ಅಪ್ಪಣ್ಣ ಅವರು ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ೨೫೦ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳ ಮೂಲಕ ಮೌಢ್ಯ, ಜ್ಯೋತಿಷ್ಯ, ದಿನ-ವಾರ-ಲಗ್ನಗಳಂತಹ ಅನಿಷ್ಟ ಆಚರಣೆಗಳನ್ನು ಪ್ರಶ್ನಿಸಿ ಸಮಾಜಕ್ಕೆ ವೈಚಾರಿಕ ಹಾಗೂ ಕ್ರಾಂತಿಕಾರಕ ಸಂದೇಶ ನೀಡಿದ್ದಾರೆ ಎಂದು ವಿವರಿಸಿದರು.
ಯುವ ಪ್ರತಿಭೆಗಳಿಗೆ ಕಸಾಪ ವೇದಿಕೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಧಿಕಾರಿ ಮಹೇಶ ಕ್ಯಾತನ ಮಾತನಾಡಿ, ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಉಳಿವು-ಬೆಳವಣಿಗೆಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಚಟುವಟಿಕೆಗಳು ಮಹತ್ವದ್ದಾಗಿವೆ. ಹಿರಿಯ ಸಾಹಿತಿಗಳ ಅನುಭವದೊಂದಿಗೆ ಯುವ ಕವಿಗಳು, ಸಾಹಿತಿಗಳು ಹಾಗೂ ಉಪನ್ಯಾಸಕರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಮೂಲಕ ಹೊಸ ತಲೆಮಾರನ್ನು ಸಾಹಿತ್ಯದತ್ತ ಸೆಳೆಯುತ್ತಿರುವುದು ಗಮನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಗೀತಾ ಚೌಧರಿ, ಸುಶೀಲಗೌಡತಿ ಬಿರಾದಾರ, ಶ್ರೀಕಾಂತ ದಾಸ್ಯಾಳ, ಮಿಲನ ಹೊಸಕೋಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಯಶ್ರೀ ಹಿರೇಮಠ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಸೇರಿದಂತೆ ಅರ್ಜುನ ಶಿರೂರ, ಬಿ.ಎಂ. ಅಜೂರ, ಜಿ.ಎಸ್. ಬಳ್ಳೂರ, ಅಶೋಕ ಗಾಯಕ್ವಾಡ, ಕೆ.ಎಸ್. ಹನಮಾಣಿ, ರವಿ ಕಿತ್ತೂರ, ಲತಾ ವಾಲೀಕಾರ, ಗಂಗಮ್ಮ ರಡ್ಡಿ, ನಿಮ್ಭೇವ್ವ ಕಾಂಬಳೆ, ಮಹಾಂತೇಶ ಹೊಸಮನಿ, ಸಿದ್ದು ಬಿಳಗಿ, ವೈ.ಎಸ್. ನಾದ ಸೇರಿದಂತೆ ಹಲವರು ಉಪಸ್ಥಿತರಿದ್ದರು.























